

ವಿಜಯವಾಣಿ ಸುದ್ದಿಜಾಲ ಗದಗ
ಹನ್ನೇರಡನೇ ಶತಮಾನದಲ್ಲಿ ನೂರಾರು ಶರಣರು ಕಾಯಕಜೀವಿಗಳಾಗಿ, ದಾಸೋಹಂಭಾವಿಗಳಾಗಿ ಪವಿತ್ರವಾದ ಬದುಕನ್ನು ಸಾಗಿಸಿದ್ದಾರೆ. ಶರಣರು ನಡೆ ನುಡಿಯನ್ನು ಪರಿಶುದ್ಧವಾಗಿಟ್ಟುಕೊಂಡು ಸಮಾಜಕ್ಕೆ ವಿನೂತನ ಸಂದೇಶ ನೀಡಿದ್ದಾರೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ 2650 ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವೈದ್ಯ ಸಂಗಣ್ಣನವರು ರಚಿಸಿದ ವಚನಗಳು ಆರೋಗ್ಯದ ಕುರಿತು ಅರಿವನ್ನು ಮೂಡಿಸುತ್ತವೆ. ಮನುಷ್ಯನಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಮುಖ್ಯ. ಎಲ್ಲ ರೋಗಗಳಿಗಿಂತ ಭವರೋಗ ಭಯಾನಕವಾದುದು. ಭವ ಎಂದರೆ ಹುಟ್ಟು. ಹುಟ್ಟಿನಿಂದ ಮನುಷ್ಯ ಸಾವು ನೋವುಗಳನ್ನು ಅನುಭವಿಸುತ್ತಾನೆ. ಭವರೋಗದಿಂದ ಮುಕ್ತಿ ಹೊಂದಬೇಕಾದರೆ ಇಷ್ಟಲಿಂಗ ಅನುಸಂದಾನ ಮಾಡಬೇಕು ಎಂದು ವೈದ್ಯ ಸಂಗಣ್ಣ ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಶ್ರೀಗಳು ಹೇಳಿದರು.
ಉಪನ್ಯಾಸಕ ಡಾ. ಉಮೇಶ ಪುರದ ಮಾತನಾಡಿ ಶರಣ ಸಂಕುಲದಲ್ಲಿ ಒಬ್ಬರಾದ ಸಂಗಣ್ಣ ಅವರು, 23 ವಚನಗಳನ್ನು ರಚಿಸಿದ್ದಾರೆ. ಬಹಿರಂಗ ಚಿಕಿತ್ಸೆ ಎಷ್ಟು ಮುಖ್ಯವೋ, ಅಂತರಂಗ ಚಿಕಿತ್ಸೆಯು ಅಷ್ಟೇ ಮುಖ್ಯವಾಗಿದೆ. ಆಹಾರ, ವಿಹಾರ, ಆಚಾರ, ವಿಚಾರ ಶುದ್ಧವಾಗಿದ್ದರೆ ದೇಹ ಆರೋಗ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಐಟಿಐ ವಿದ್ಯಾಥಿರ್ಗಳಿಗೆ ಉಚಿತ ಟೂಲ್ ಕಿಟ್ ವಿತರಣೆ ಹಾಗೂ ವಿದ್ಯಾಥಿರ್ಗಳ ತಾಯಂದಿರಿಗೆ ಸೀರೆ ವಿತರಿಸಲಾಯಿತು.
ಶಿವಣ್ಣ ಮುಳಗುಂದ, ರಮೇಶ ಪಿ. ಈಶ್ವರಪ್ಪ ದ್ಯಾಮನಗೌಡರ ಇತರರು ಉಪಸ್ಥಿತಿ ಇದ್ದರು.