

ವಿಜಯವಾಣಿ ಸುದ್ದಿಜಾಲ ಗದಗ
ಬಸವಣ್ಣನವರು ಜಾತಿ, ಮತ, ಪಂಥ, ವರ್ಗ, ವರ್ಣ ಭೇದಗಳನ್ನು ತೊಡೆದು ಮನುಷ್ಯ ಮನುಷ್ಯರಲ್ಲಿ ನಿಜವಾದ ಪ್ರೀತಿ, ಸಾಮರಸ್ಯ ಭಾವವನ್ನು ಬೆಳೆಸಿದರು ಎಂದು ಅಂತೂರ ಬೆಂತೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಎಸ್.ಜಿ. ದೊಡ್ಡಣ್ಣನವರ ಹೇಳಿದರು.
ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪ್ರಗತಿಶೀಲ ಸಂದ 2642 ನೆಯ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಬಸವಣ್ಣನವರ ಮಾತುಗಳು ವಚನಗಳಾದವು. ಅವರು ನುಡಿದಂತೆ ನಡೆದವರು. ಬಸವಣ್ಣನವರು ಮನುಷ್ಯನ ಜೀವನಕ್ಕೆ ನೈತಿಕ ಮೌಲ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಬಸವಣ್ಣನವರ ಕಾಲದಲ್ಲಿ ಎಷ್ಟೋ ಜನ ಶರಣರು ಬದುಕಿನ ಅನುಭವಗಳನ್ನು ಕಟ್ಟಿಕೊಂಡು ಅನುಭಾವಿಗಳಾದರು. ಈ ಶರಣರಲ್ಲಿ ಕುರುಬ ಗೊಲ್ಲಾಳೇಶ್ವರರು ಒಬ್ಬರು. ಇಂದಿನ ಜನತೆಗೆ, ಯುವಕರಿಗೆ, ಮಕ್ಕಳಿಗೆ ಇಂತಹ ಶರಣರ ತತ್ವಾದರ್ಶಗಳ ಅವಶ್ಯಕತೆ ಬಹಳಷ್ಟು ಇದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿ ಡಾ. ತೋಂಟದ ಸಿದ್ಧರಾಮ ಶ್ರೀಗಳು "ಶಿವಾನುಭವ' ಅಂದರೆ ಒಳ್ಳೆಯದನ್ನು ಕುರಿತು ಚಿಂತನೆ ಮಾಡುವುದು ಮತ್ತು ಅನುಭವಕ್ಕೆ ತಂದುಕೊಳ್ಳುವುದು. ಶರಣರ, ಮಹಾತ್ಮರ, ಸಂತರ ಸಂದೇಶಗಳನ್ನು ಮತ್ತು ಅವರ ಪವಿತ್ರ ಚರಿತ್ರೆಯನ್ನು ಕೇಳುವುದು. ಅವರ ಮಾನವೀಯ ಮೌಲ್ಯಗಳನ್ನು ತಿಳಿದುಕೊಂಡು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇವೆಲ್ಲವೂ ಶಿವಾನುಭವ ಎನಿಸಿಕೊಳ್ಳುತ್ತದೆ. ದೇವರಲ್ಲಿ ನಂಬಿಕೆ, ಶ್ರದ್ಧೆ, ವಿಶ್ವಾಸವನ್ನಿಟ್ಟುಕೊಂಡಾಗ ಮಾತ್ರ ಮನುಷ್ಯನ ಬದುಕು ಅರ್ಥರ್ಪೂಣವಾಗುತ್ತದೆ ಮತ್ತು ಮನುಷ್ಯ ಜನ್ಮಕ್ಕೆ ಬೆಲೆ ಬರುತ್ತದೆ. ಕುರುಬ ಗೊಲ್ಲಾಳೇಶ್ವರರಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ, ಅವರು ಶಿವನಲ್ಲಿ ಇಟ್ಟಿರುವ ಅಚಲ ನಂಬಿಕೆ. ಗೊಲ್ಲಾಳೇಶ್ವರರು ಮೊದಲಿಗೆ ಶ್ರೇಷ್ಠ ಶಿವಭಕ್ತರಾಗಿದ್ದರು. ನಂತರ ಕಲ್ಯಾಣಕ್ಕೆ ಬಂದು ಶರಣರ ಸಂದಲ್ಲಿ ಸೇರಿಕೊಂಡು ಮಹಾನ ಶಿವಶರಣರಾಗಿ ಹೊರಹೊಮ್ಮಿದರು ಎಂದು ಶ್ರೀಗಳು ತಿಳಿಸಿದರು.
ಕೀರಪ್ಪ ಹೆಬಸೂರ, ಜಯದೇವ ಮೆಣಸಗಿ ಮಾತನಾಡಿದರು.
ಕುಮಾರಸ್ವಾಮಿ ಹಿರೇಮಠ, ಹೇಮಂತ ಹಿರೇಮಠ ವಚನ ಸಂಗೀತ ನೆರವೇರಿಸಿದರು. ಕಾವ್ಯಾ ವಿರೂಪಾಯ್ಯ ಇಚ್ಚಂಗಿಮಠ ಧರ್ಮಗ್ರಂಥ ಪಠಣ ಮಾಡಿದರು, ಸಂದ ಅಧ್ಯ ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ ಇತರರು ಇದ್ದರು.