

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಆಗ್ನೇಯ ದಿಕ್ಕಿನಲ್ಲಿರುವ ‘ಗೌಡನ ಕೆರೆ’ಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ. ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ ‘ಗೌಡನ ಕೆರೆ’ ಎಂಬ ಹೆಸರು ಬಂತೆAದು ಪ್ರತೀತಿಯಿದೆ. ಇದರ ಇತಿಹಾಸವನ್ನು ಇಲ್ಲಿನ ಶಾಸನವು ಹೇಳುತ್ತಿದೆ.
ಶಿವನೇಗೌಡರ ಹೆಸರಿರುವ ಶಾಸನ ತಾಲ್ಲೂಕಿನ ಸೊಣ್ಣೇನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ತೆಯಾಗಿದೆ. ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಇದುವರೆಗೂ ಪ್ರಕಟವಾಗದಿರುವ ಈ ಶಾಸನವನ್ನು ಪತ್ತೆಹಚ್ಚಿದ್ದಾರೆ. ಕನ್ನಡ ಲಿಪಿ, ತೆಲುಗು ಭಾಷೆಯಲ್ಲಿರುವ ಈ ಶಾಸನವನ್ನು ಕ್ರಿ.ಶ. ೧೫೯೦ ರಲ್ಲಿ ಬರೆಯಲಾಗಿದೆ. ಆಗ ವಿಜಯನಗರ ಸಾಮ್ರಾಜ್ಯವನ್ನು ವೆಂಕಟಪತಿರಾಯರು ಆಳುತ್ತಿದ್ದರು. ಅವರ ಸಾಮಂತರಾಗಿ ಸುಗುಟೂರು ಪ್ರಾಂತ್ಯವನ್ನು ಇಮ್ಮಡಿ ತಮ್ಮಪ್ಪಗೌಡರು ಆಳ್ವಿಕೆ ನಡೆಸುವಾಗ, ಶಿಡ್ಲಘಟ್ಟ ಪ್ರಾಂತ್ಯವನ್ನು ಆಳಿ, ಅಪಾರ ಜನಸೇವೆ ಮಾಡಿ, ಉತ್ತಮ ಆಡಳಿತ ನಡೆಸಿ ದೈವಸನ್ನಿಧಿಗೆ ಸೇರಿರುವ ಶಿವನೇಗೌಡರ ನೆನಪಿನಲ್ಲಿ ಅವರ ಅನುಯಾಯಿಗಳಾದ ನಾಣಪ್ಪಗೌಡರ ಮಗ ಶಿಲೇಗೌಡರು, ಶಿವಸಮುದ್ರ ಎಂಬ ಕೆರೆಯನ್ನು ಜನೋಪಕಾರಕ್ಕಾಗಿ ಕಟ್ಟಿಸಿ ದಾನ ಮಾಡಿರುವುದಾಗಿ ಇದರಲ್ಲಿ ಬರೆಯಲಾಗಿದೆ. ಕ್ರಿ.ಶ. ೧೫೯೦ ರ ಜುಲೈ ತಿಂಗಳ ೨೧ ನೇ ತಾರೀಖಿನ ಮಂಗಳವಾರ ಸೂರ್ಯ ಗ್ರಹಣದ ದಿನದಂತೆ ಬರೆಯಲಾಗಿದೆ. ಈ ದಿನ ದಾನ ಕೊಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ನಮ್ಮ ಹಿರಿಯರದ್ದು. ಹಾಗಾಗಿ ಜನಾನುರಾಗಿ ಆಡಳಿತಗಾರ ಶಿವನೇಗೌಡರ ನೆನಪಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿ ದಾನ ಮಾಡಲಾಗಿದೆ ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದ್ದಾರೆ.