

ನಿಡಗುಂದಿ: ಸಾಮಾಜಿಕ ಸುಧಾರಣೆ ಹರಿಕಾರ ಡಿ.ದೇವರಾಜ್ ಅರಸು ಅವರು ಮೌನ ಕ್ರಾಂತಿಯ ಮೂಲಕ ಕನ್ನಡ ನಾಡಿನ ಭೂರಹಿತರಿಗೆ 7 ಲಕ್ಷ ಹೆಕ್ಟೇರ್ ಭೂ ಒಡೆತನ ನೀಡುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಸ್ಮರಣೀಯರಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಸಿಎಂ ದಿ.ಡಿ.ದೇವರಾಜ್ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜ್ ಅರಸು ಅವರು ತಮ್ಮ ಅವಧಿಯಲ್ಲಿ ಜೀತ ಪದ್ಧತಿ ನಿರ್ಮೂಲನೆ, ಸಾಲದ ಜಾಲದಿಂದ ಬಿಡುಗಡೆ, ಬಡವರಿಗೆ ಸೂರು- ನೀರು- ಶಿಕ್ಷಣ ಆರೋಗ್ಯ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿ ಗೌರವಯುತ ಬದುಕು ನಡೆಸಲು ಕೊಡುಗೆ ನೀಡಿದ್ದಾರೆ. ಅರಸ ಅವರು ಗತಿಸಿದರೂ ಅವರ ಕ್ರಾಂತಿಕಾರಕ ಯೋಜನೆಗಳು ಎಂದೆಂದಿಗೂ ಪ್ರಸ್ತುತವಾಗುತ್ತವೆ ಎಂದರು.
ಮುಖಂಡ ಪರಶುರಾಮ ಕಾರಿ ಮಾತನಾಡಿ, ಅರಸು ಅವರು ನಾಡಕಂಡ ಧೀಮಂತ ಹಾಗೂ ಮೇಧಾವಿ ರಾಜಕಾರಣಿಯಾಗಿದ್ದಾರೆ. ಭೂ ಸುಧಾರಣೆ ಕಾಯ್ದೆ, ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಬಡವರ ಪರವಾದ ಯೋಜನೆಗಳನ್ನು ಮಾಡಿ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಅವರು, ಈ ನಾಡಿಗೆ ಕೊಟ್ಟಂಥ ಸೇವೆ, ಜಾರಿಗೆ ತಂದ ಕಾರ್ಯಕ್ರಮಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.
ಅರಸು ಅವರ ಭಾವಚಿತ್ರಕ್ಕೆ ಗ್ರೇಡ್-2 ತಹಸೀಲ್ದಾರ್ ಎಚ್.ಎನ್.ಬಡಿಗೇರ ಪೂಜೆ ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಉಪತಹಸೀಲ್ದಾರ್ ಕೆ.ವೈ.ಹೊಸಮನಿ, ಶೇಖರ ರೂಡಗಿ, ರಮೇಶ ಮಾಗಿ, ರಾಘು ವಡವಡಗಿ, ರವಿ ಭೋವಿವಡ್ಡರ, ತಮ್ಮಣ್ಣ ಬಂಡಿವಡ್ಡರ, ಸುರೇಶ ಸಣ್ಣಮಣಿ, ಮಹೇಶ ಹೊಲ್ದೂರ, ಆಂಜನೇಯ ಮೋಪಗಾರ, ಸಿದ್ದರಾಮೇಶ ಚಲವಾದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.