ಶಿವಗಂಗೆಯಲ್ಲಿ ಶಿವನಾಮ ಸ್ಮರಣೆ

DABASPETE SHIVAGANGE 01
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯಲ್ಲಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆಯಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹರನಾಮಸ್ಮರಣೆಯೊಂದಿಗೆ ಭಕ್ತರು ಶ್ರೀ ಗವಿಗಂಗಾಧರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು. ಬುಧವಾರ ಸೂರ್ಯೋದಯಕ್ಕೆ ಮುನ್ನವೇ ಆರಂಭವಾದ ವಿವಿಧ ಪೂಜಾ ವಿಧಿವಿಧಾನಗಳು ಗುರುವಾರ ಸೋರ್ಯೋದಯದೊಂದಿಗೆ ಸಮಾಪ್ತಿ ಕಂಡಿತು. ಬುಧವಾರ ಮುಂಜಾನೆಯಿಂದಲೇ ಶಿವಗಂಗೆ ಶಿಖರದತ್ತ ಹರಿದುಬಂದ ಜನಸಾಗರ ಶಿವನಾಮ ಸ್ಮರಣೆ ಪಠಿಸುತ್ತಾ ಪೂಜಾ ಕೈಂಕರ್ಯದಲ್ಲಿ ತಲ್ಲೀನರಾದ ದೃಶ್ಯ ಕಂಡುಬಂತು. ದೇಗುಲದ ಪ್ರತಿ ಮೆಟ್ಟಿಲುಗಳನ್ನು ಹತ್ತುವಾಗಲು ಓ ನಮಃ ಶಿವಾಯ ಮಂತ್ರ ಪಠಿಸುತ್ತಿದ್ದ ಭಕ್ತರು ಭಾವಪರವಶರಾಗಿದ್ದರು.

ಪ್ರಸಾದ ವಿನಿಯೋಗ: ಸಾವಿರಾರು ಭಕ್ತರಿಗೆ ಅನ್ನದಾಸೋಹದೊಂದಿಗೆ ಸಜ್ಜಿಗೆ, ಅವಲಕ್ಕಿ ಸಿಹಿಯ ಪ್ರಸಾದ ವಿತರಣೆ ನಡೆಯಿತು. ಗಂಗಾಧರೇಶ್ವರನ ದರ್ಶನ ಪಡೆಯಲು ಭಕ್ತರ ಸಾಲಿನಲ್ಲಿ ನೂಗುನುಗ್ಗಲು ಕಂಡುಬಂತು. ಘಂಟಾನಾದದೊಂದಿಗೆ ಗಂಗಾಧರೇಶ್ವರಿಗೆ ಮಂಗಳಾರತಿ ಸೇವೆ ನೆರವೇರಿಸಲಾಯಿತು.

ಆಹೋರಾತ್ರಿ ಜಾಗರಣೆ: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ನೆಲೆಸಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಶಿವರಾತ್ರಿಯ ಹಬ್ಬದಂದು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ, ಎಂದಿನಂತೆ ಈ ಬಾರಿಯೂ ಉಪವಾಸ ಮತ್ತು ಜಾಗರಣೆಯ ಮೂಲಕ ಶಿವನಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಶಿವರಾತ್ರಿ ವಿಶೇಷವಾಗಿ ದೇವಾಲಯವು ಮುಂಜಾನೆ 5 ಗಂಟೆಯಿಂದ ಆರಂಭಗೊಂಡು 24 ಗಂಟೆಯವರೆಗೂ ನಿರಂತರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಶಿವನಿಗೆ ಬಿಲ್ವಪತ್ರೆ. ತುಂಬೆ ಮತ್ತು ಜಾಜಿ ಪುಷ್ಪದಿಂದ ವಿಶೇಷ ಅಲಂಕಾರ ನೆರವೇರಿಸಲಾಗಿತ್ತು. ಪ್ರತಿ ಗಂಟೆಗೊಮ್ಮೆ ರುದ್ರಾಭಿಷೇಕ, ತುಪ್ಪದ ಸೇವೆ, ಬೆಣ್ಣೆ ಅಲಂಕಾರ, ಪಂಚಾಮೃತ ಅಭಿಷೇಕ ಮತ್ತು ದೇವಾಲಯದಲ್ಲಿ ದೀಪಾಲಂಕಾರದ ಪೂಜೆ ಗಮನ ಸೆಳೆಯಿತು.

ವಿಸ್ಮಯ ವಿಶೇಷ: ಶಿವಗಂಗೆಯ ಶ್ರೀ ಗಂಗಾಧರೇಶ್ವರ ಸ್ವಾಮಿಯ ಲಿಂಗದ ಮೇಲೆ ತುಪ್ಪವನ್ನು ಸವರಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುವ ವಿಸ್ಮಯ ವೀಕ್ಷಣೆಗೆ ಸಾವಿರಾರು ಭಕ್ತರು ಮುಗಿಬಿದ್ದಿದ್ದರು. ಶಿಖರದ ಮೇಲಿರುವ ಶ್ರೀ ಗಿರಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ರುದ್ರಭಿಷೇಕ ಹಾಗೂ ಸಂಜೆಯಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು, ಶಿವರಾತ್ರಿ ಪ್ರಯುಕ್ತ ಇಡೀ ರಾತ್ರಿ ದೀಪಾಲಂಕಾರದಿಂದ ಶಿಖರ ಕಂಗೋಳಿಸುತ್ತಿತ್ತು. ನಿರಂತರ ಭಜನೆ, ಹರಿಕಥೆ, ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.

ಶಿವರಾತ್ರಿ ಎಂದರೆ ರಾತ್ರಿ ಪೂಜೆಯ ವಿಶೇಷವಾಗಿದೆ, ರಾತ್ರಿ ಎಂದರೆ ಕತ್ತಲು. ಅಂದರೆ ಅಜ್ಞಾನ ಎಂಧರ್ಥ, ಈ ಅಜ್ಞಾನವನ್ನು ದೂರಮಾಡಿ ಸುಜ್ಞಾನ ಬೆಳೆಸುವ ಸಲುವಾಗಿ ಪ್ರತಿ ಸಂವತ್ಸರದ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುದರ್ಶಿಯ ರಾತ್ರಿ ಶಿವಪಾರ್ವತಿ ಭೂಮಿಗೆ ಬರುತ್ತಾರೆ ಅಂದು ಶಿವನನ್ನು ಭಜಿಸಿ ಪೂಜಿಸುವ ದಿನವೇ ಶಿವರಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿವಗಂಗೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಪೂಜೆ ನೆರವೇರಿಸಲಾಗಿದೆ.

ಎಸ್.ಕೆ.ಶ್ಯಾಂ ಪ್ರಸಾದ್ ದೀಕ್ಷೀತ್, ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net