ಉತ್ತಮ ಶಿಕ್ಷಣ, ಸಂಸ್ಕಾರ-ಸಂಸ್ಕೃತಿ ನೀಡಿ - ದೇವಪುರದ ಶಿವಮೂರ್ತಿ ಶಿವಾಚಾರ್ಯರ ಸಲಹೆ

23-DVD-3
ಲಿಂಗದಹಳ್ಳಿ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ 52 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು.
Published on

ದೇವದುರ್ಗ: ಆಡಂಬರದ ಮದುವೆಗಳು ದುಂದುವೆಚ್ಚ ಮಾಡಿದರೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಮುನ್ನುಡಿ ಬರೆಯಲಿವೆ. ಉಳ್ಳವರೂ ಇಂಥ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದು ದೇವಪುರದ ಜಡೆ ಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ಲಿಂಗದಹಳ್ಳಿ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ಹಾಗೂ ದೇವಸ್ಥಾನ ಜನ ಕಲ್ಯಾಣ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ನಾಗರಿಕತೆ ಹಾಗೂ ಜೀವನ ಶೈಲಿಯಿಂದ ಪರಿಸರ, ಮಾನವೀಯ ಮೌಲ್ಯಗಳು, ಜನಗಳ ನಡುವಿನ ಸಂಬಂಧಗಳು ಹಾಳಾಗಿವೆ. ಜನರಲ್ಲಿ ಪ್ರೀತಿ, ವಿಶ್ವಾಸ ಬೆಳೆಸಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಬೇಕಿದೆ. ಇಂಥ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ ಅದು ಸಾಧ್ಯವಿದೆ. ನವಜೋಡಿಗಳು ಆದರ್ಶ ಜೀವನ ಕಟ್ಟಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡುವ ಸಂಕಲ್ಪ ಮಾಡಬೇಕು. ಮದುವೆ ಎನ್ನುವುದು ಈಗ ಪ್ರತಿಷ್ಠೆಯಾಗಿದ್ದು, ಅನಗತ್ಯ ದುಂದುವೆಚ್ಚಕ್ಕೆ ಕಾರಣವಾಗಿದೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಮದುವೆ ಹೆಚ್ಚಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಪೀಠಾಧಿಪತಿ ಶ್ರೀ ಮಹಾಂತಯ್ಯ ಸ್ವಾಮೀಜಿ, ದೇವರಭೂಪುರ ಹಿರೇಮಠದ ಗಜದಂಡ ಶಿವಾಚಾರ್ಯರು, ನಾವದಗಿ ಬೃಹನ್ಮಠದ ರಾಜೇಂದ್ರ ಒಡೆಯರು, ಕೆಂಭಾವಿಯ ಚನ್ನಬಸವ ಸ್ವಾಮೀಜಿ, ಚಬನೂರು ರಾಮಲಿಂಗಯ್ಯ ಸ್ವಾಮೀಜಿ, ಮಲದಕಲ್ ಗುರುಬಸವ ರಾಜಗುರು, ಶಿಖರಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಚಿಂಚೋಡಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಗಣಜಲಿ, ಸಹಕಾರ ಸಂಘದ ಅಧ್ಯಕ್ಷ ವೆಂಕಟರಾಯ ಬೆನಕನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net