ಸಮಾಜ ಸೇವೆಯಿಂದ ವ್ಯಕ್ತಿಯ ಸರ್ವಾಂಗೀಣ ವಿಕಾಸ

ಸೋಮಿನಕೊಪ್ಪದ ಕೆಎಚ್‌ಬಿ ಪ್ರೆಸ್ ಕಾಲನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳದ ನಿವೃತ್ತ ಶಿಕ್ಷಕ ಕೆ.ನಾರಾಯಣ ನಾಯಕ್ ಅವರಿಗೆ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೋಮಿನಕೊಪ್ಪದ ಕೆಎಚ್‌ಬಿ ಪ್ರೆಸ್ ಕಾಲನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳದ ನಿವೃತ್ತ ಶಿಕ್ಷಕ ಕೆ.ನಾರಾಯಣ ನಾಯಕ್ ಅವರಿಗೆ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on: 

ಶಿವಮೊಗ್ಗ: ಸಮಾಜ ಸೇವೆಯಿಂದ ವ್ಯಕ್ತಿಯ ಸರ್ವಾಂಗೀಣ ಹಾಗೂ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಬಂಟ್ವಾಳದ ನಿವೃತ್ತ ಶಿಕ್ಷಕ ಕೆ.ನಾರಾಯಣ ನಾಯಕ್ ಹೇಳಿದರು.

ಸೋಮಿನಕೊಪ್ಪದ ಕೆಎಚ್‌ಬಿ ಪ್ರೆಸ್ ಕಾಲನಿಯಲ್ಲಿ ಬುಧವಾರ ಶ್ರೀ ದೊಡ್ಡಮ್ಮ ದೇವಿ ಚಾರಿಟಬಲ್ ಟಸ್ಟ್‌ನಿಂದ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ 1 ಲಕ್ಷ ರೂ. ನಗದು ಒಳಗೊಂಡ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಮಾಜ ಸೇವೆಯಿಂದ ವ್ಯಕ್ತಿಯ ಬದುಕು ಸಾರ್ಥಕವಾಗುತ್ತದೆ. ವಿದ್ಯೆ, ಉದ್ಯೋಗ, ವಿವಿಧ ಸಾರ್ವಜನಿಕ ಸೌಲಭ್ಯ ಪಡೆಯುವ ನಾವು ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬಡವರು, ಅನಾಥರು ಹಾಗೂ ಮಕ್ಕಳ ಸೇವೆಯಲ್ಲಿ ದೇವರನ್ನು ಕಾಣಬೇಕು. ವಿದ್ಯೆಯಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಹೇಳಿದರು.

ಸೇವಾವಧಿಯಲ್ಲಿ ನನ್ನ ವೇತನದ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಡುತ್ತಿದ್ದೆ. ನಿವೃತ್ತಿ ಬಳಿಕವೂ ಪಿಂಚಣಿಯ ಶೇ.50ರಷ್ಟು ಹಣವನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದೇನೆ. ವಿವಿಧ ಸಂಘ ಸಂಸ್ಥೆಗಳು ಸನ್ಮಾನದ ರೂಪದಲ್ಲಿ ನೀಡುವ ಹಣವನ್ನೂ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಬಳಸುತ್ತಿದ್ದೇನೆ ಎಂದರು.

10 ಸಾವಿರ ರೂ. ನಗದು ಒಳಗೊಂಡ ಶ್ರೀ ಲಲಿತಾ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೊಪ್ಪ ತಾಲೂಕಿನ ಹರಿಹರಪುರದ ಪ್ರೇಮಾ ಮಂಜುನಾಥ್, ಭಜನೆ ಮತ್ತು ಸತ್ಸಂಗದಿಂದ ಮಾನಸಿಕ ನೆಮ್ಮದಿ, ಭಗವಂತನ ಅನುಗ್ರಹ ದೊರೆಯುತ್ತದೆ. ಆಧುನಿಕ ಯುಗದ ಒತ್ತಡದಿಂದಾಗಿ ಮನುಷ್ಯನಿಗೆ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಮಕ್ಕಳು ಮತ್ತು ಯುಜಜನತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು ಎಂದರು.

ಬೆಂಗಳೂರಿನ ರಮಣ ಮಹರ್ಷಿ ಆಶ್ರಮದ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ, ಹಿರಿಯ ವಕೀಲ ಏಕಲವ್ಯ, ಸಮಾಜ ಸೇವಕ ಧರಣಿಕುಮಾರ್ ಮತ್ತು ಪತ್ರಕರ್ತ ಗಜೇಂದ್ರ ಕುಡಾಲ್ಕರ್ ಅವರನ್ನು ಗೌರವಿಸಲಾಯಿತು. ಮಹಾಶಕ್ತಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಚಂಡಿಕಾ ಹೋಮ, ಸಾಮೂಹಿಕ ದುರ್ಗಾಕವಚ ಪಠಣ, ದೊಡ್ಡಮ್ಮ ದೇವಿ ಮೆರವಣಿಗೆ, ತೊಟ್ಟಿಲು ಶಾಸ್ತ್ರ, ಭಜನೆ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಸಾಹಿತಿ ಎಂ.ಎನ್.ಸುಂದರರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರಿನ ಭವತಾರಿಣಿ ಆಶ್ರಮದ ಅಧ್ಯಕ್ಷೆ ಶ್ರೀ ಮಾತಾ ವಿವೇಕಮಯಿ, ಹೊಸಕೋಟೆ ಶ್ರೀ ಶಾರದಾಶ್ರಮದ ಅಧ್ಯಕ್ಷೆ ಶ್ರೀ ಮಾತಾ ಬ್ರಹ್ಮಮಯೀ, ಹಿರಿಯೂರು ಶಾರದಾಶ್ರಮದ ಶ್ರೀ ಮಾತಾ ಚೈತನ್ಯಮಯೀ, ಕನಕಪುರ ಶ್ರೀ ಶಾರದಾಶ್ರಮದ ಶ್ರೀ ಮಾತಾ ಜ್ಯೋತ್ಸ್ನಾಮಯೀ ಹಾಗೂ ಹೊಸಕೋಟೆಯ ಸಹೋದರಿ ವತ್ಸಲಾ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net