

ತೀರ್ಥಹಳ್ಳಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತೀರ್ಥಹಳ್ಳಿಯಲ್ಲಿ ಸಮಾಜದ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಸೇರಿರುವುದು ಐತಿಹಾಸಿಕ ಬೆಳವಣಿಗೆ. ಸಮಾಜದ ಜತೆ ಸದಾ ಜತೆಯಾಗಿ ನಿಲ್ಲುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣಾ ಸಮಿತಿ ಹಾಗೂ ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ, ನಾರಾಯಣಗುರು ವಿಚಾರ ವೇದಿಕೆ, ಈಡಿಗ-ಬಿಲ್ಲವ ಮಹಿಳಾ ಸಂಘ ಹಾಗೂ ನಾರಾಯಣ ಗುರು ಸಹಕಾರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪಂಗಡ, ಪಕ್ಷಗಳ ಭಿನ್ನಾಭಿಪ್ರಾಯ ಮರೆತು ಸಮಾಜದ ಏಳಿಗೆಗಾಗಿ ದುಡಿಯೋಣ. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು, ಅಧ್ಯಯನ ಪೀಠ ಸ್ಥಾಪಿಸಬೇಕು ಹಾಗೂ ನಾರಾಯಣ ಗುರುಗಳ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕೆಂದು ನಾನು ವಿರೋಧ ಪಕ್ಷದಲ್ಲಿದ್ದಾಗಲೇ ಮೊದಲ ಬಾರಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದೆ. ಈ ಬೇಡಿಕೆಗಳಿಗೆ ಸಿದ್ದರಾಮಯ್ಯ ಅಂದೇ ಸಮ್ಮತಿ ಸೂಚಿಸಿದ್ದರು. ನಾರಾಯಣ ಗುರುಗಳ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂದು ಹೇಳಿದರು.
ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾರಗನಜಡ್ಡು ಕಾರ್ತಿಕೇಯ ಮಠದ ಶ್ರೀ ಯೋಗೇಂದ್ರ ಅವಧೂತರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ನಾರಾಯಣಗುರು ವಿಚಾರ ವೇದಿಕೆ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಇತರರಿದ್ದರು.