ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಿ Shivamogga

High Court Circuit Bench
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಸಾಗರದಲ್ಲಿ ವಕೀಲರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಎಂ.ಬಿ.ಗಿರೀಶ್ ಗೌಡ, ಎಸ್.ಎಲ್.ಮಂಜುನಾಥ್, ನಾಗರಾಜ್, ಎಂ.ರಾಘವೇಂದ್ರ, ಸುದೀಪ್ ಇತರರಿದ್ದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಸಾಗರದಲ್ಲಿ ವಕೀಲರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಎಂ.ಬಿ.ಗಿರೀಶ್ ಗೌಡ, ಎಸ್.ಎಲ್.ಮಂಜುನಾಥ್, ನಾಗರಾಜ್, ಎಂ.ರಾಘವೇಂದ್ರ, ಸುದೀಪ್ ಇತರರಿದ್ದರು.
Published on: 

ಸಾಗರ: ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಸಾಗರ ವಕೀಲರ ಭವನದ ಎದುರು ವಕೀಲರ ಸಂಘದಿಂದ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಆರೆಂಟು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದೇವೆ. ಎರಡು ಬಾರಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೂ ಮನವಿ ನೀಡಲಾಗಿದೆ. ಈ ಹೋರಾಟ ಕೇವಲ ವಕೀಲರ ಹಿತಾಸಕ್ತಿಗೆ ಎಂದು ಪರಿಗಣಿಸದೆ ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರಮುಖರು ಈ ಧರಣಿಯಲ್ಲಿ ಪಾಲ್ಗೊಳ್ಳಬೇಕು. ಶಿವಮೊಗ್ಗದಲ್ಲಿ ಸಂಚಾರ ಪೀಠ ಆಗುವ ತನಕ ಧರಣಿ ನಿಲ್ಲಿಸುವುದಿಲ್ಲ ಎಂದು ಸಾಗರ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ ತಿಳಿಸಿದರು.

ಹಿರಿಯ ವಕೀಲ ಎಸ್.ಎಲ್.ಮಂಜುನಾಥ್ ಮಾತನಾಡಿ, ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಬೇಕು ಎಂದು ವಕೀಲರ ಸಂಘ ಜಿಲ್ಲಾದ್ಯಂತ ಹೋರಾಟ ನಡೆಸಲಿದೆ. ಇಂತಹ ಹೋರಾಟ ಯಶಸ್ಸಿಗೆ ಎಲ್ಲರ ಸಹಕಾರವೂ ಮುಖ್ಯ. ರಾಜಕೀಯ ಮತ್ತು ಭಾವನಾತ್ಮಕ ಸಂಗತಿಗಳನ್ನು ಬದಿಗಿರಿಸಿ ನೋಡಿದಾಗ ಶಿವಮೊಗ್ಗದಲ್ಲಿ ಸಂಚಾರ ಪೀಠ ಆಗಲು ಎಲ್ಲ ಅರ್ಹತೆಯೂ ಇದೆ. ವಕೀಲರ ಸಂಖ್ಯೆ, ನ್ಯಾಯಾಲಯಗಳ ಸಂಖ್ಯೆ, ಭೌಗೋಳಿಕ ವಿಸ್ತೀರ್ಣ, ಸಾರಿಗೆ ಸೌಕರ್ಯ, ಕಕ್ಷಿದಾರರ ಸಂಖ್ಯೆ ಇನ್ನಿತರ ಗಮನಿಸಿ ಶಿವಮೊಗ್ಗದಲ್ಲಿಯೇ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ಸಂಚಾರ ಪೀಠ ಕೇವಲ ವಕೀಲರಿಗಾಗಿ ಅಲ್ಲ. ಕಕ್ಷಿದಾರರಿಗೂ ಇದು ತೀರ ಅಗತ್ಯ. ನ್ಯಾಯದಾನ ಶೀಘ್ರವಾಗಿ, ಕಡಿಮೆ ಖರ್ಚಿನಲ್ಲಿ ಸಿಗುವಂತೆ ಆಗಬೇಕು. ಎಲ್ಲರಿಗೂ ಬೆಂಗಳೂರಿಗೆ ಹೋಗಲು ಆಗುವುದಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ಪೀಠ ಇದ್ದರೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಸರ್ಕಾರ ಸ್ಪಂದಿಸದಿದ್ದರೆ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಹಿರಿಯ ವಕೀಲ ಎಂ.ರಾಘವೇಂದ್ರ ಎಚ್ಚರಿಸಿದರು.

ವಕೀಲರಾದ ವಿನಯಕುಮಾರ್, ಎಚ್.ಆರ್.ಶ್ರೀಧರ್, ಜ್ಯೋತಿ ಕೋವಿ, ರಾಘವೇಂದ್ರ ಖಂಡಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net