

ತೀರ್ಥಹಳ್ಳಿ: ಶ್ರೀಮಂತರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು. ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಹೊಂದಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.
ಶನಿವಾರ ಸಂಸ್ಕೃತಿ ಮಂದಿರ ಆವರಣದಲ್ಲಿ ಏರ್ಪಡಿಸಿದ್ದ 172ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ಸಮಾಜಬಾಂಧವರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ದೇವರು, ಜಾತಿ, ಧರ್ಮದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳು ದ್ವೇಷ ಮಾಡಬಾರದು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ಪಡೆಯುವ ಹಕ್ಕಿದೆ. ಶಿಕ್ಷಣ ಸ್ವಂತಿಕೆ ಕಲಿಸುತ್ತದೆ ಎಂದು ಹೇಳಿದರು.
ಜೀವನಕ್ಕೋಸ್ಕರ ರಾಜಕಾರಣಕ್ಕೆ ಬರಬೇಡಿ. ಜೀವನವನ್ನು ಬದಲಾಯಿಸಲು ರಾಜಕಾರಣ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ, ಆರೋಗ್ಯ, ಅನ್ನ ಕೊಡುವವರನ್ನು ಬೆಂಬಲಿಸಿ. ಸಮಾಜದ ಕೊನೆಯ ವ್ಯಕ್ತಿಗೂ ಶೈಕ್ಷಣಿಕ ಲಾಭ ತಲುಪುವಂತೆ ಅನುಕೂಲ ಮಾಡಿಕೊಡಿ. ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಸಮುದಾಯಕ್ಕೆ ಶಿಕ್ಷಣ ಸಂಸ್ಥೆ ಆರಂಭಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಅಸ್ಪಶ್ಯತೆ, ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾಗಿದ್ದ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಬದಲಾವಣೆ ತಂದುಕೊಟ್ಟ ಕೀರ್ತಿ ನಾರಾಯಣಗುರುಗಳದ್ದು. ಅವರ ಸಂದೇಶಗಳು ಸರ್ವಕಾಲಿಕ. ಕೇರಳವನ್ನು ಶೇ.100ರಷ್ಟು ಸಾಕ್ಷರತೆ ದಾರಿ ತೋರಿದ್ದರೆ ಅದರ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಒಗ್ಗಟ್ಟಾಗಿ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಬೆಳವಣಿಗೆ ಆರಂಭದಲ್ಲಿ ಸಮಾಜ ವ್ಯಕ್ತಿಯನ್ನು ಅನುಮಾನಿಸುತ್ತದೆ. ಬೆಳೆದು ನಿಂತ ನಂತರ ಅಪಮಾನಿಸುತ್ತದೆ. ಅನುಮಾನ, ಅಪಮಾನ ಸಹಿಸಿಕೊಂಡು ಯಶಸ್ವಿಯಾದರೆ ಅದೇ ಸಮಾಜ ಸನ್ಮಾನಿಸುತ್ತದೆ. ಟೀಕೆಗಳಿಗೆ ಉತ್ತರಗಳನ್ನು ಕೆಲಸದ ಮೂಲಕ ಕೊಡಬೇಕು. ಸಮರ್ಪಣ ಭಾವದಿಂದ ಸಂಘ ಕಟ್ಟಿದವರನ್ನು ಅಪಮಾನ ಮಾಡುವ ಕೆಲಸ ಮಾಡಬಾರದು. ಗೊಂದಲ ಮಾಡದೆ ಅವರೊಂದಿಗೆ ಕೈಜೋಡಿಸಬೇಕು ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೆಚ್ಚು ಜನಸಂಖ್ಯೆ ಹೊಂದಿರುವವರು ಶೋಷಿತ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡಬಾರದು. ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ಪ್ರಯತ್ನ ಆಗಬೇಕು. ಸಮುದಾಯಕ್ಕೆ ಅನ್ಯಾಯ ನಡೆದರೆ ಅದನ್ನು ಖಂಡಿಸುವ ತಾಕತ್ತು, ಶಕ್ತಿ ಸಮಾಜ ಬಾಂಧವರಲ್ಲಿ ಬೆಳೆಯಬೇಕು ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಅಶೋಕಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎಸ್ಎನ್ಜಿವಿ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಇತರರಿದ್ದರು.