ಸೊರಬ: ಹಾಲು, ಮೊಸರು, ತುಪ್ಪ ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿ ಸೊರಬ ತಾಲೂಕು ಜೆಡಿಎಸ್ ಘಟಕದ ಪ್ರಮುಖರು ತಹಸೀಲ್ದಾರ್ಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹುಚ್ಚಪ್ಪ ಚಿಮಣೂರು ಮಾತನಾಡಿ, ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳದಿಂದ ಸಾರ್ವಜನಿಕರಿಗೆ ವಿತರಿಸುವ ಹಾಲು, ಮೊಸರು, ತುಪ್ಪ ಹಾಗೂ ಇತರ ಹಾಲಿನ ಉತ್ಪನ್ನಗಳ ಬೆಲೆಯನ್ನು 8 ರಿಂದ 35 ರೂ.ವರೆಗೆ ಏರಿಸಿರುವುದನ್ನು ಇಳಿಸಬೇಕು. ಶೇ.23ರಷ್ಟು ಹೆಚ್ಚಿಸಿರುವ ಕೆಎಸ್ ಆರ್ಟಿಸಿ ಬಸ್ ಪ್ರಯಾಣ ದರವನ್ನು ಸರ್ಕಾರ ಮರುಪರಿಶೀಲನೆ ಮಾಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಆಭಾವ, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಪರಿಣಾಮ ಅಗತ್ಯ ವಸ್ತುಗಳಾದ ಅಕ್ಕಿ, ಸಕ್ಕರೆ, ಬೇಳೆ ಕಾಳು ಸೇರಿ ಇತರ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೆ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳದಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಸರ್ಕಾರ ಬೆಲೆ ಏರಿಕೆಯನ್ನು ತಗ್ಗಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಶ್ರೀಧರ್ ಶೇಟ್, ಕೆ.ಅಜ್ಜಪ್ಪ, ಟಿ. ಪುಂಡಲೀಕಪ್ಪ, ಸುಮಾ ಗಜಾನನ, ಶ್ರುತಿ, ಕುಮಾರ್, ಸುಧೀರ್ ಭಟ್, ವಿಷ್ಣು, ನಾಗರಾಜ, ರೇಣುಕಮ್ಮ, ಚಂದ್ರಣ್ಣ, ಮಹೇಶ ಹೆಗಡೆ, ರಾಘವೇಂದ್ರ, ನೀಲಕಂಠಪ್ಪ, ಮಲ್ಲಪ್ಪ ಇತರರಿದ್ದರು.