

ಹೊಸನಗರ: ಪ್ರತಿ ವಿಷಯದಲ್ಲೂ ನಗರ ಹೋಬಳಿಗೆ ಅನ್ಯಾಯವಾಗುತ್ತಿದೆ. ನೀವು ಕೊಟ್ಟ ಬೆಳೆವಿಮೆ ಪರಿಹಾರ ವಾಪಸ್ ಕೊಡುತ್ತೇವೆ. ನಮಗೆ ಸ್ವಲ್ಪ ವಿಷ ಕೊಟ್ಟು ನೀವು ನೆಮ್ಮದಿಯಾಗಿರಿ ಎಂದು ತಾಲೂಕಿನ ಹೊಸೂರು ಸಂಪೆಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಂಪೇಕಟ್ಟೆ ಗ್ರಾಪಂ ಆವರಣದಲ್ಲಿ ಸಭೆ ನಡೆಸಿದ ರೈತರು ಅವೈಜ್ಞಾನಿಕ ಬೆಳೆ ವಿಮೆ ಪರಿಹಾರದಲ್ಲಿ ನಗರ ಹೋಬಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2024-25 ಸಾಲಿನಲ್ಲಿ ಬೆಳೆವಿಮೆಯಲ್ಲಿ ಅನ್ಯಾಯವಾಗಿದೆ. ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. 25-26ನೇ ಸಾಲಿನಲ್ಲಿ ಹಾಗೂ ಇದೀಗ ಮತ್ತೆ ಅದೇ ಅನ್ಯಾಯ. ಬೆಳೆವಿಮೆಯಲ್ಲಿ ಬಹುತೇಕ ಕಡೆ ಶೇ.70ರಷ್ಟು ಬೆಳೆವಿಮೆ ಬಂದಿದೆ. ಬಹುತೇಕ ರೈತರಿಗೆ ಎಕರೆಗೆ 27 ಸಾವಿರ ರೂ. ಬಂದಿದೆ. ಆದರೆ ಸಂಪೇಕಟ್ಟೆ, ಅರಮನೆಕೊಪ್ಪ, ಮೂಡುಗೊಪ್ಪ, ನಿಟ್ಟೂರು ಗ್ರಾಪಂ ಸೇರಿದಂತೆ ನಗರ ಹೋಬಳಿ ರೈತರಿಗೆ ಕಟ್ಟಿದ ಹಣಕ್ಕಿಂತ ಕಡಿಮೆ ಮೈನಸ್ ವಿಮಾ ಪರಿಹಾರ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಶಾಸಕ, ಸಂಸದರು, ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೆವು. ಆದರೆ ಮತ್ತೆ ಅದೇ ಅನ್ಯಾಯ ಮರುಕಳಿಸಿದೆ.
ನಮಗೆ ಬಂದ ಬೆಳೆವಿಮೆ ವಾಪಸ್ ಕೊಡುತ್ತೇವೆ. ಇದಲ್ಲದೆ ಅಡಿಕೆಗೆ ವಿವಿಧ ರೋಗದ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿಯಿಂದ ನಮಗೆ ಬದುಕಲು ಸಾಧ್ಯವಿಲ್ಲ. ಎಲ್ಲರೂ ಸೇರಿ ನಮಗೆ ಸ್ವಲ್ಪ ವಿಷ ಕೊಡಿ. ಈ ಸಂಬಂಧ ತುರ್ತಾಗಿ ಸಮಸ್ಯೆಗೆ ಪರಿಹಾರ ನೀಡಿ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ತಹಸೀಲ್ದಾರ್ ಭರತರಾಜ್ಗೆ ಎಷ್ಟೇ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಿಡಿಒ ಜಯಮ್ಮ ನೇತೃತ್ವದಲ್ಲಿ ಮಳೆಮಾಪನ ಯಂತ್ರ ಪರಿಶೀಲಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಗಣಪತಿ, ವಿವೇಕ್ ಕಾಮತ್, ನಾಗಪ್ಪ, ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.