ತಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ದಾಳಿಗೆ ಸಿಲುಕಿ ಯುವ ಪಶುವೈದ್ಯೆ ಮೃತಪಟ್ಟಿರುವ ಘಟನೆ ಸಂಬಂಧ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪಶುವೈದ್ಯೆ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಈ ಕಷ್ಟದ ಹಾಗೂ ದುಃಖದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮೃತ ವೈದ್ಯೆಯ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದಿದ್ದು, ಮೃತ ಯುವ ವೈದ್ಯೆಯ ಕುಟುಂಬಸ್ಥರಿಗೆ ನಿಯಮಾನುಸಾರವಾಗಿ ಕೂಡಲೇ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಮೃಗಾಲಯಗಳಲ್ಲಿ ಕಾರ್ಯನಿರ್ವಹಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪ್ರಮಾಣಿತ ಕಾರ್ಯಾಚರಣೆ ಮಾನದಂಡಗಳನ್ನು (ಎಸ್‌ಓಪಿ) ಪಾಲನೆ ಮಾಡಬೇಕು. ಜತೆಗೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನಡೆದಿರುವ ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡದ ಮೂಲಕ ಸಮಗ್ರ ತನಿಖೆ ನಡೆಸಬೇಕು. 7 ದಿನದೊಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.