ಕರೆಂಟ್ ಶಾಕ್‌ಗೆ ಕಾಡಾನೆ ಬಲಿ Elephant Death

ಶಿವಮೊಗ್ಗ: ತಾಲೂಕಿನ ಬಸವಾಪುರ ಸಮೀಪದ ಈಚಲವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡು ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Elephant Death
ಈಚಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕಾಡಾನೆ.
Published on: 

ಶಿವಮೊಗ್ಗ: ತಾಲೂಕಿನ ಬಸವಾಪುರ ಸಮೀಪದ ಈಚಲವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡು ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಈಚಲವಾಡಿ ಗ್ರಾಮದ ಅಲಿಮಿಯಾ ಬಂಧಿತ. ಶಂಕರ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಿನಿಂದ ನಾಡಿನತ್ತ ಬಂದಿದ್ದ 10ರಿಂದ 12 ವರ್ಷದ ಗಂಡು ಕಾಡಾನೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದೆ. ಭತ್ತದ ಬೆಳೆಯನ್ನು ಕಾಡುಹಂದಿಗಳು ನಾಶ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ತಡೆಯಲು ಜಮೀನಿನ ಸುತ್ತ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಎನ್ನಲಾಗಿದೆ.

ಶನಿವಾರ ಬೆಳಗಿನ ಜಾವ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಕಾಡಾನೆ ವಿದ್ಯುತ್ ತಂತಿ ತುಳಿದ ಪರಿಣಾಮ ಮೃತಪಟ್ಟಿದೆ. ಕಾಡಾನೆ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿತು.

ಕಾಡಾನೆ ಸಾವಿನಿಂದ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾಡುಪ್ರಾಣಿಗಳ ಶಿಕಾರಿಗಾಗಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸುವ ಕೃತ್ಯಗಳು ವನ್ಯಜೀವಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಘಟನೆ ಕುರಿತು ಅರಣ್ಯಾಧಿಕಾರಿಗಳ ಪರಿಶೀಲನೆ ಮುಂದುವರಿದಿದೆ. ಈಚಲವಾಡಿ ಗ್ರಾಮದಲ್ಲಿ ನಡೆದ ಕಾಡಾನೆ ಸಾವಿನ ಘಟನೆ, ಅಕ್ರಮ ವಿದ್ಯುತ್ ತಂತಿ ಅಳವಡಿಕೆ ಹಾಗೂ ವನ್ಯಜೀವಿಗಳ ಸುರಕ್ಷೆ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ.

ಅರಣ್ಯ ಇಲಾಖೆ ಸ್ಪಷ್ಟನೆ

ಈಚಲವಾಡಿ ಗ್ರಾಮದ ಸ.ನಂ.16ರ ಭತ್ತದ ಗದ್ದೆಯ ಬದುವಿನಲ್ಲಿ ಶನಿವಾರ ಬೆಳಗಿನ ಜಾವ ಕಾಡಾನೆ ಮೃತಪಟ್ಟಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮೃತದೇಹದ ಅಕ್ಕಪಕ್ಕ ತಂತಿ ಬೇಲಿ ಹಾಗೂ ಹತ್ತಿರದಲ್ಲೇ ವಿದ್ಯುತ್ ಕಂಬ ಇದ್ದು, ವಿದ್ಯುತ್ ಸ್ಪರ್ಶದಿಂದಲೇ ಆನೆ ಅಸುನೀಗಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭತ್ತದ ಪೈರು ತೆನೆ ಬಿಡುವ ಹಂತದಲ್ಲಿದ್ದರಿಂದ ಇತ್ತೀಚೆಗೆ ಕಾಡುಹಂದಿಗಳ ಉಪಟಳ ಹೆಚ್ಚಾಗಿತ್ತು. ಪ್ರಾಣಿಗಳನ್ನು ತಡೆಯಲು ಗದ್ದೆಯ ಬದುವಿನ ಮೇಲೆ ಶುಕ್ರವಾರ ತಂತಿ ಹಾಕಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಜಮೀನಿನ ಮಾಲೀಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಮೆಸ್ಕಾಂಗೆ ದೂರು ನೀಡಲಾಗಿದೆ. ನಿಯಮಿತ ಕಾರ್ಯವಿಧಾನದ ಪ್ರಕಾರ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
ಪ್ರಸನ್ನಕೃಷ್ಣ ಪಟಗಾರ, ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್