

ಶಿವಮೊಗ್ಗ: ತಾಲ್ಲೂಕಿನ ಹಾಯ್ ಹೊಳೆ ಸಮೀಪದ ಈಚಲವಾಡಿ ಗ್ರಾಮದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಸಾವನ್ನಪ್ಪಿದೆ.
ಶಂಕರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಕಾಡುಪ್ರಾಣಿಗಳ ಶಿಕಾರಿಗಾಗಿ ಖದೀಮರು ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ತಂತಿಯನ್ನು ಅಳವಡಿಸಿದ್ದರು ಎನ್ನಲಾಗಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆ, ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಯ ಸಾವು ಅರಣ್ಯ ಇಲಾಖೆ ಹಾಗೂ ಈಚಲವಾಡಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಾಡುಪ್ರಾಣಿಗಳ ಶಿಕಾರಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಅಕ್ರಮವಾಗಿ ವಿದ್ಯುತ್ ಲೈನ್ ಹಾಕಿದ ಆರೋಪಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.