ಕೆಪಿಎಸ್‌ಸಿ ಹಗರಣದಲ್ಲಿ ರಾಜ್ಯ ಸರ್ಕಾರದ ಮೌನ ಏಕೆ? I kpsc scam

ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ
ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರಶ್ನೆ
  • ನೀಟ್ ವಿಚಾರದಲ್ಲಿ ಕೇಂದ್ರದಿಂದ ಕಟ್ಟುನಿಟ್ಟಿನ ಕ್ರಮ
  • ರಾಜ್ಯದ ವಿವಿಧ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಆರೋಪ
ಶಿವಮೊಗ್ಗ:

ನೀಟ್ (neet) ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಕೈ ಜೋಡಿಸಿದ್ದ ಕಾಂಗ್ರೆಸ್ (congress) ಕರ್ನಾಟಕದಲ್ಲಿ ಕೆಪಿಎಸ್‌ಸಿ (kpsc) ಹಗರಣದ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರಶ್ನಿಸಿದರು.

ನೀಟ್ ವಿರುದ್ಧ ದೆಹಲಿಯಲ್ಲಿ ನಡೆದ ಹೋರಾಟಕ್ಕೆ ಅನೇಕ ದೇಶ ವಿರೋಧಿ ಶಕ್ತಿಗಳು ಕೈ ಜೋಡಿಸಿದ್ದವು. ಕಾಂಗ್ರೆಸ್ ಕೂಡ ಅದರಲ್ಲಿ ಒಂದಾಗಿತ್ತು. ದೇಶದಲ್ಲಿ ಅರಾಜಕತೆ ಸೃಷ್ಟಿಸಬೇಕು. ಆ ಮೂಲಕವಾದರೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ಕಾಂಗ್ರೆಸ್‌ನ ಒಂದಂಶದ ಕಾರ್ಯಕ್ರಮವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲ ರೀತಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ರೂಪಿಸುತ್ತಿದೆ. ಆದರೆ ಕೆಪಿಎಸ್‌ಸಿ ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ವಿವಿಧ ಇಲಾಖೆಯಲ್ಲಿನ ನೇಮಕಾತಿಗೆ ಸಂಬಂಧಿಸಿ ಕೆಪಿಎಸ್‌ಸಿಯಲ್ಲಿ ಅನೇಕ ಹಗರಣಗಳು ನಡೆಯುತ್ತಿವೆ. 2015ರಿಂದ 2018ರವರೆಗೆ ಕೆಪಿಎಸ್‌ಸಿ ಮತ್ತು ಕೆಇಎಯಿಂದ ನಡೆದ ಎಫ್‌ಡಿಎ, ಎಸ್‌ಡಿಎ ಸೇರಿ ಹಲವು ಇಲಾಖೆಗೆ ಗೆಜೆಟೆಡ್ ದರ್ಜೆ ನೇಮಕಾತಿಯಲ್ಲಿ ಹಗರಣವಾಗಿದೆ. 2016ರಲ್ಲಿ ಪಿಯು ಹಾಗೂ 2018ರಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕಠಿಣ ಕಾನೂನು ತರಲಿಲ್ಲ ಎಂದು ದೂರಿದರು.
ಇತ್ತೀಚಿನ ಪಶುಸಂಗೋಪನಾ ಇಲಾಖೆ ನೇಮಕಾತಿ ಪ್ರಕ್ರಿಯೆಯಲ್ಲೂ ಅಕ್ರಮಗಳ ಆರೋಪ ಕೇಳಿಬಂದಿದ್ದು, ಸರ್ಕಾರಿ ಹುದ್ದೆ ಪಡೆಯುವ ಕನಸನ್ನು ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಸರ್ಕಾರ ಆಟವಾಡುತ್ತಿದೆ. ಇಂತಹ ವ್ಯವಸ್ಥೆ ನಿರ್ಮಾಣವಾಗಲು ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಇಇ ನೇಮಕಾತಿ ಪ್ರಕರಣದ ತನಿಖೆಗೆ ವಿಜಯ್‌ಕುಮಾರ್ ಕುಚನೂರು ನೇತೃತ್ವದ ಸಮಿತಿ 40 ಸಭೆ ನಡೆಸಿ, ಸಿಸಿಟಿವಿ ದೃಶ್ಯಾವಳಿ, ಒಎಂಆರ್ ಶೀಟ್‌ಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ 498 ಪುಟಗಳ ವರದಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.
ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ದೀನದಯಾಳು, ಮಂಜುನಾಥ ನವುಲೆ, ನಗರ ಮಾಧ್ಯಮ ಪ್ರಮುಖ್ ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.

ಸರ್ಕಾರದ ವಿರುದ್ಧ ಹೋರಾಟ

ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು. ಸದನದ ಹೊರಗೂ ನಮ್ಮ ಹೋರಾಟ ಮುಂದುವರಿಯಲಿದೆ. ಕೆಪಿಎಸ್‌ಸಿ ಅಕ್ರಮ ತಡೆಗೆ ರಾಜ್ಯ ಸರ್ಕಾರ ಬಲಿಷ್ಠ ಕಾನೂನು ರೂಪಿಸಬೇಕು ಎಂಬುದು ಬಿಜೆಪಿ ಒತ್ತಾಯವಾಗಿದೆ. ಆದರೆ ಕಾಂಗ್ರೆಸ್‌ಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ. ಕೇಂದ್ರದಲ್ಲಿ ಎನ್‌ಡಿಎ ನೀಟ್ ಹಾಗೂ ರಾಷ್ಟ್ರಮಟ್ಟದ ಪರೀಕ್ಷೆಗಳ ವಿಚಾರದಲ್ಲಿ ಕಠಿಣ ಕಾನೂನು ರೂಪಿಸಲು ಮುಂದಾದರೆ ಅದಕ್ಕೆ ಕಾಂಗ್ರೆಸ್ ತಡೆಯೊಡ್ಡುತ್ತಿರುವುದೇ ಅದರ ದ್ವಂದ್ವ ನಿಲುವಿಗೆ ನಿದರ್ಶನವಾಗಿದೆ ಎಂದು ಎಸ್.ಎನ್.ಚನ್ನಬಸಪ್ಪ ಹೇಳಿದರು.

ಕೇಂದ್ರವನ್ನು ಅನುಸರಿಸಲಿ

ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ತಂದಿರುವ ಸಾರ್ವಜನಿಕ ಪರೀಕ್ಷೆಗಳ (ತಿದ್ದುಪಡಿ) ಮಸೂದೆ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ಕೆಪಿಎಸ್‌ಸಿ ಸೇರಿ ವಿವಿಧ ನೇಮಕಾತಿ ಪರೀಕ್ಷೆಗಳ ಅಕ್ರಮಗಳಿಗೆ ಕಡಿವಾಣ ಹಾಕುವ ಕಠಿಣ ಕಾನೂನು ತರಬೇಕು ಎಂದು ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.
ನೀಟ್ ಪರೀಕ್ಷೆ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದ್ದು, ರಾಜ್ಯಸಭೆಯಲ್ಲಿಯೂ ಅನುಮೋದನೆ ಪ್ರಕ್ರಿಯೆ ನಡೆದಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಂಡಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ವಿವಿಧ ಕ್ಷೇತ್ರದ ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಿರುವುದು ಸಮಯೋಚಿತವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net