ಸಿದ್ಧಾಂತ ಮುಖ್ಯ ಎನ್ನುವವರಿಂದ ಬಿಜೆಪಿ ಸೋಲಿಸುವ ಪ್ರಯತ್ನವೇಕೆ? I why trying to defeat bjp?
ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
2028ರ ಅಭ್ಯರ್ಥಿ ಆಯ್ಕೆ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು
ಪಕ್ಷ ಅವರಿಗೇ ಟಿಕೆಟ್ ನೀಡಿದರೆ ಹೊತ್ತು ಮೆರೆಸುತ್ತೇವೆ
ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರತಿಕ್ರಿಯೆ
ಶಿವಮೊಗ್ಗ: ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, (eeshwarappa) ಶಾಸಕ ಎಸ್.ಎನ್.ಚನ್ನಬಸಪ್ಪ (channabasappa) ನಡುವೆ ನಿಧಾನವಾಗಿ ರಾಜಕೀಯ ಬಿಸಿ ಏರುತ್ತಿದೆ. 2028ರಲ್ಲಿ ಶಿವಮೊಗ್ಗ (shivamogga) ಕ್ಷೇತ್ರದಿಂದ ನಾನು ಅಥವಾ ನನ್ನ ಮಗ ಸ್ಪರ್ಧಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂಬ ಈಶ್ವರಪ್ಪ ಮಾತು ಚನ್ನಬಸಪ್ಪ ಅವರನ್ನು ಕೆರಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಸಿದ್ಧಾಂತವೇ ನನ್ನ ಸಿದ್ಧಾಂತ ಎನ್ನುವವರು ಬಿಜೆಪಿಯನ್ನೇ ಸೋಲಿಸಲು ಯತ್ನಿಸುವುದೇಕೆ ಎಂದು ಪ್ರಶ್ನಿಸುವ ಮೂಲಕ ಈಶ್ವರಪ್ಪ ಅವರ ಹೆಸರು ಹೇಳದೆ ಪರೋಕ್ಷವಾಗಿ ತಿರುಗೇಟು ನೀಡಿದರು.
ನಿರ್ದಿಷ್ಟ ಸಿದ್ಧಾಂತಕ್ಕೆ 14 ವರ್ಷಗಳ ಹಿಂದೆ ಆರಂಭವಾದ ರಾಷ್ಟ್ರಭಕ್ತರ ಬಳಗ ರಾಜಕೀಯ ಸ್ವರೂಪ ಪಡೆದಿದೆ. ಅಲ್ಲಿ ಇರುವವರೂ ಬಿಜೆಪಿ ಕಾರ್ಯಕರ್ತರೇ. ಜಿಲ್ಲೆಯಲ್ಲಿ ಬಿಜೆಪಿ ಬಲವಾಗಿ ಬೇರು ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್‌ನಿಂದಲೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಇನ್ನೂ ರಾಷ್ಟ್ರಭಕ್ತ ಬಳಗದಿಂದ ಸಾಧ್ಯವಾಗುವುದೇ ಎಂದು ತಿರುಗೇಟು ನೀಡಿದರು.
ಅವರಾಗಲಿ(ಕೆ.ಎಸ್.ಈಶ್ವರಪ್ಪ), ಅವರ ಮಗನಾಗಲಿ (ಕೆ.ಇ.ಕಾಂತೇಶ್) ಚುನಾವಣೆಗೆ ನಿಲ್ಲುವುದು ಬೇಡ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಮೊದಲು ಅವರು ಪಕ್ಷದೊಳಕ್ಕೆ ಬರಲಿ. 2028ರ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಒಂದು ವೇಳೆ ಅವರೇ ಅಭ್ಯರ್ಥಿ ಎಂದಾದರೆ ಅವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ನಾಗರಾಜ್, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನವುಲೆ, ಮಾಜಿ ಮೇಯರ್ ಸುನೀತಾ ಅಣ್ಣಪ್ಪ, ಮಾಜಿ ಉಪಮೇಯರ್ ಸುರೇಖಾ ಮುರಳೀಧರ್, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.
ಒಳಗೆ ಬಂದು ಶುದ್ಧೀಕರಿಸಲಿ
ಬಿಜೆಪಿ ಶುದ್ಧೀಕರಣ ಆಗಬೇಕು ಎನ್ನುವವರು ಪಕ್ಷದೊಳಗೆ ಬಂದು ಶುದ್ಧೀಕರಣ ಮಾಡಲಿ. ಎಲ್ಲೋ ಕುಳಿತು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಬಿಜೆಪಿ ಬಲಹೀನವಾಗಿದೆ ಎಂದು ಅವರು (ಕೆ.ಎಸ್.ಈಶ್ವರಪ್ಪ) ಹೇಳುತ್ತಿದ್ದಾರೆ. ಪಕ್ಷವನ್ನು ಸದೃಢವಾಗಿ ಕಟ್ಟಲು ಕಾರ್ಯಕರ್ತರು, ನಾಯಕರ ಪಡೆ ಇದೆ. ಪ್ರಸ್ತುತ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವೈಚಾರಿಕ ಸಂಘರ್ಷ ನಡೆಯುತ್ತಿದೆ. ಸದಾ ಹಿಂದುತ್ವ ಎನ್ನುವವರೇ ಹಿಂದುತ್ವಕ್ಕೆ ಕೊಡಲಿ ಏಟು ನೀಡಲು ಮುಂದಾಗಿದ್ದಾರೆ ಎಂದು ಎಸ್.ಎನ್.ಚನ್ನಬಸಪ್ಪ ಅವರು ಕೆ.ಎಸ್.ಈಶ್ವರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
"
ಅವರು (ಕೆ.ಎಸ್.ಈಶ್ವರಪ್ಪ) ದೊಡ್ಡವರು. ಅವರನ್ನು ಪಕ್ಷದ ದೊಡ್ಡ ನಾಯಕರೇ ಕರೆತರಬೇಕು. ನಾನು ಅವರ ಮುಂದೆ ಸಣ್ಣವನು. ಅವರ ಆದೇಶ ಕೇಳಿಕೊಂಡು ಬೆಳೆದವನು. ಹೀಗಾಗಿ ಅವರಿಗೆ ಸಲಹೆ ನೀಡುವ, ಮಾರ್ಗದರ್ಶನ ಮಾಡುವ ಅಧಿಕಾರ ನನಗಿಲ್ಲ.