

ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ವಿದ್ಯುತ್ ವಿಭಾಗ) ಗೋವಿಂದರಾಜ್ (52) ವಸತಿಗೃಹದಲ್ಲಿ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಸೇಲಂನ ಗೋವಿಂದರಾಜ್ ಅವರು ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆ ಮುಂಭಾಗದ ಅಧಿಕಾರಿಗಳ ಕ್ವಾರ್ಟರ್ಸ್‌ನಲ್ಲಿ ಒಬ್ಬರೇ ವಾಸವಿದ್ದರು. 2008ರಲ್ಲಿ ವಿಐಎಎಸ್‌ಎಲ್ ಕಾರ್ಖಾನೆಗೆ ವರ್ಗಾವಣೆಯಾಗಿ ಬಂದಿದ್ದರು.
ಸೇಲಂನಲ್ಲಿ ವಾಸವಿರುವ ಅವರ ಪತ್ನಿ ಹಾಗೂ ಕುಟುಂಬಸ್ಥರು ಒಂದೆರಡು ದಿನಗಳ ಹಿಂದೆ ಭದ್ರಾವತಿಗೆ ಬಂದಿದ್ದರು. ಭಾನುವಾರ ಹಿಂದಿರುಗಿದ್ದ ಕುಟುಂಬವನ್ನು ಮಧ್ಯಾಹ್ನ ಬೀರೂರಿನ ರೈಲ್ವೆ ನಿಲ್ದಾಣಕ್ಕೆ ತಾವೇ ಸ್ವತಃ ಕಾರಿನಲ್ಲಿ ಬಿಟ್ಟುಬಂದಿದ್ದಾರೆ. ಸೋಮವಾರ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಬೆಳಗ್ಗೆ 8.30ಕ್ಕೆ ನೇಣು ಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಗೋವಿಂದರಾಜ್ ತಾನು ಮಾಡಿದ ಅಂದಿನ ಕರ್ತವ್ಯದ ಮಾಹಿತಿಯನ್ನು ತನ್ನ ಆಪ್ತ ಸಹಾಯಕನಿಗೆ ದೂರವಾಣಿ ಮೂಲಕ ತಿಳಿಸುತ್ತಿದ್ದರು. ಸೋಮವಾರ ಬೆಳಗ್ಗೆ ಮಾತ್ರ ಆಪ್ತ ಸಹಾಯಕನ ಫೋನ್ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಆತನೇ ಅವರ ಮನೆ ಬಳಿ ಬಂದಿದ್ದಾರೆ. ಅಷ್ಟರಲ್ಲಿ ಮೀಟರ್ ರೀಡಿಂಗ್ ತೆಗೆದುಕೊಳ್ಳಲು ಬಂದಿದ್ದ ಮೆಸ್ಕಾಂ ನೌಕರನೂ ಸಹ ಬಿಲ್ ಕೊಡಲು ಕೂಗಿದ್ದಾನೆ. ಆದರೆ ಯಾರೂ ಹೊರಬರದ ಕಾರಣ ವಾಪಸ್ ಬಂದಿದ್ದಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಅವರ ಆಪ್ತ ಸಹಾಯಕನಿಗೆ ಮೀಟರ್ ರೀಡರ್ ಮಾಹಿತಿ ನೀಡಿದ್ದಾರೆ. ಆಗ ಆಪ್ತ ಸಹಾಯಕ ಚಿಲಕ ಹಾಕದ ಮನೆಯ ಬಾಗಿಲು ತೆಗೆದು ಒಳಗೆ ಪ್ರವೇಶಿಸಿದಾಗ ಮನೆಯ ಹಾಲ್‌ನಲ್ಲಿ ಗೋವಿಂದರಾಜ್ ನೇಣು ಬಿಗಿದುಕೊಂಡಿದ್ದಾರೆ. ಶವ ಕಂಡು ಕೂಡಲೆ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಅಧಿಕಾರಿ, ಸಿಬ್ಬಂದಿ ದೌಡು: ಸುದ್ದಿ ಹರಡುತ್ತಿದ್ದಂತೆ ಕ್ಷಣಾರ್ಧದಲ್ಲೆ ವಿಐಎಸ್‌ಎಲ್ ಆಧಿಕಾರಿಗಳು, ಕಾಯಂ ನೌಕರರು, ಗುತ್ತಿಗೆ ಕಾರ್ಮಿಕರು ಹಾಗೂ ಸ್ಥಳೀಯರು ಗೋವಿಂದರಾಜ್ ಅವರ ನಿವಾಸದ ಬಳಿ ದೌಡಾಯಿಸಿದರು. ಸ್ಥಳಕ್ಕೆ ನ್ಯೂಟೌನ್ ಪೊಲೀಸರೂ ಸಹ ಆಗಮಿಸಿ ಸ್ಥಳ ಪರಿಶೀಲಿಸಿದರು. ಬೆರಳಚ್ಚು ತಜ್ಞರನ್ನೂ ಸಹ ಸ್ಥಳಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ. ಮಾಹಿತಿ ತಿಳಿದ ಕುಟುಂಬದವರುರು ಸೇಲಂನಿಂದ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದ ಪೊಲೀಸರು ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
ಉತ್ತಮ ಹೆಸರು: ಗೋವಿಂದರಾಜ್ ಅವರು ಎಲ್ಲರೊಂದಿಗೂ ಅಧಿಕಾರಿ ಎಂಬ ಗರ್ವವಿಲ್ಲದೆ ಸೌಜನ್ಯದಿಂದ ವರ್ತಿಸುತ್ತಿದ್ದರು. ಕೆಲಸದ ವಿಚಾರದಲ್ಲಿ ಜವಾಬ್ದಾರಿಯುತ ಅಧಿಕಾರಿಯಾಗಿ ಹೆಸರು ಮಾಡಿದ್ದರು ಎಂದು ಕಾರ್ಮಿಕ ವಲಯ ಹಾಗೂ ಆಧಿಕಾರಿಗಳು ಹೇಳುತ್ತಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಇತ್ತೀಚೆಗೆ ಮಗಳ ವಿವಾಹವನ್ನೂ ನೆರವೇರಿಸಿದ್ದರು.