ವಿಶ್ವಕರ್ಮ ಯೋಜನೆ ಯಶಸ್ಸಿಗೆ ಅಭಿಯಾನ I vishwakarma scheme drive

ವಿಶ್ವಕರ್ಮ ಯೋಜನೆಯಡಿ ಗೊಂಬೆ ತಯಾರಿಕೆ ತರಬೇತಿ ಪಡೆಯುತ್ತಿರುವ ಮಹಿಳೆಯರು.
ವಿಶ್ವಕರ್ಮ ಯೋಜನೆಯಡಿ ಗೊಂಬೆ ತಯಾರಿಕೆ ತರಬೇತಿ ಪಡೆಯುತ್ತಿರುವ ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ವೃತ್ತಿಪರರಿಗೆ ಪ್ರೋತ್ಸಾಹ ನೀಡಲು ಜಿಲ್ಲಾಡಳಿತ ಸಜ್ಜು
  • ಇದೇ ತಿಂಗಳು ಪೋರ್ಟಲ್ ಮರು ಆರಂಭ
  • ಫಲಾನುಭವಿಗಳಿಗೆ ಸಿಗಲಿದೆ ಎರಡನೇ ಕಂತಿನ ಹಣ
ಅರವಿಂದ ಅಕ್ಲಾಪುರ ಶಿವಮೊಗ್ಗ
ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ (vishwakarma) ಯೋಜನೆಯನ್ನು (scheme) ಜಿಲ್ಲೆಯಲ್ಲಿ ಮತ್ತಷ್ಟು ಪ್ರಚುರಪಡಿಸಲು, ಅರ್ಹರಿಗೆ ಶೀಘ್ರ ಸಾಲ ವಿತರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದರ ಭಾಗವಾಗಿ ವಿಶೇಷ ಅಭಿಯಾನ (drive) ನಡೆಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಶಿವಮೊಗ್ಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ತಲುಪಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆ ಯಶಸ್ಸಿಗೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಯೋಜನೆಯ ಆರಂಭದಲ್ಲಿ ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನಡೆಸಿ ತರಬೇತಿಗೆ ಕುಶಲಕರ್ಮಿಗಳನ್ನು ಗುರುತಿಸಲಾಗಿತ್ತು. ಇವರಿಗೆ ತರಬೇತಿ ನೀಡಿ ಬ್ಯಾಂಕ್ ಸಾಲದ ಗ್ಯಾರಂಟಿ ನೀಡಲಾಗಿತ್ತು. ತರಬೇತಿ ಪಡೆದವರ ಪೈಕಿ ಹಲವರು ಸಾಲ ಪಡೆದು ಸ್ವಯಂ ಉದ್ಯೋಗ ಆರಂಭಿಸಲು ಮುಂದಾಗಲಿಲ್ಲ. ಇನ್ನೊಂದೆಡೆ ಸ್ವಯಂ ಉದ್ಯೋಗ ಆರಂಭಿಸಲು ಬಯಸಿದ್ದವರಿಗೆ ಹಲವು ತಾಂತ್ರಿಕ ಕಾರಣಗಳಿಂದ ಸಾಲ ಮಂಜೂರಾಗಲಿಲ್ಲ. ಸ್ವೀಕೃತವಾದ ಅರ್ಜಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿದ್ದವು. ಹಾಗಾಗಿ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಲಿಲ್ಲ.
ಏನಿದರ ಪ್ರಯೋಜನ?
ಕುಶಲಕರ್ಮಿಗಳನ್ನು ಉತ್ತೇಜಿಸಲು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. 18 ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಗುರುತಿಸಲಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಹೀಗೆ ನೋಂದಣಿ ಮಾಡಿಕೊಂಡ ಕುಶಲಕರ್ಮಿಗಳಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಕೌಶಲ ಬೆಳೆಸಲು ಫಲಾನುಭವಿ ಬಯಸಿದ ವೃತ್ತಿಯಲ್ಲಿ ಐದು ದಿನ ತರಬೇತಿ ನೀಡಲಾಗುವುದು. ಪ್ರಮಾಣಪತ್ರವೂ ಸಿಗಲಿದೆ. ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಶೇ. 5ರ ಬಡ್ಡಿ ದರದಲ್ಲಿ ಮೊದಲ ಹಂತದಲ್ಲಿ 1 ಲಕ್ಷ ರೂ. ಸಾಲ ಬ್ಯಾಂಕ್‌ನಿಂದ ನೀಡಲಾಗುತ್ತದೆ. ಅದನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ ಎರಡನೇ ಹಂತದಲ್ಲಿ ಎರಡು ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ವೃತ್ತಿ ಆರಂಭಿಸಲು ಅನುಕೂಲವಾಗುವಂತೆ 15 ಸಾವಿರ ರೂ. ಮೌಲ್ಯದ ವಿವಿಧ ಉಪಕರಣಗಳನ್ನು ನೀಡಲಾಗುತ್ತದೆ. ಸಮರ್ಪಕವಾಗಿ ಮರುಪಾವತಿಸಿದಲ್ಲಿ ಎರಡನೇ ಹಂತದಲ್ಲಿ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುವುದು.
"

ಆರಂಭದಲ್ಲಿ ವಿಶ್ವಕರ್ಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಅನೇಕರು ಸಮರ್ಪಕ ದಾಖಲೆ ಒದಗಿಸಲು ವಿಫಲರಾಗಿದ್ದಾರೆ. ಸಾಲ ಮಂಜೂರಾತಿ ಹಾಗೂ ಸೂಕ್ತ ತರಬೇತಿಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆ ಯಶಸ್ಸಿಗೆ ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಯಾವ ವೃತ್ತಿಗೆ ಅನುಕೂಲ?

ಪಿಎಂ ವಿಶ್ವಕರ್ಮ ಯೋಜನೆಯಡಿ ಗುರುತಿಸಿರುವ 18 ವೃತ್ತಿಗಳಲ್ಲಿ ಮರದ ಕೆಲಸ ಮಾಡುವವರು, ದೋಣಿ ತಯಾರಕರು, ಬೀಗ ಹಾಗೂ ಕೀಲಿ ಮಾಡುವರು, ಮಡಕೆ, ಸಾಂಪ್ರದಾಯಿಕ ಶಸ್ತ್ರ ತಯಾರಕರು, ಅಕ್ಕಸಾಲಿಗರು, ಕಮ್ಮಾರರು, ಕಲ್ಲು ಕುಟಿಗರು, ಸಾಂಪ್ರದಾಯಿಕವಾಗಿ ಬುಟ್ಟಿ, ಚಾಪೆ ಮಾಡುವವರು, ಗೊಂಬೆ, ಆಟಿಕೆ ತಯಾರಕರು, ಕ್ಷೌರಿಕರು, ಬಟ್ಟೆ ಹೊಲಿಯುವವರು, ಮೀನಿನ ಬಲೆ ತಯಾರಕರನ್ನು ಗುರುತಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆ

ಅರ್ಜಿ ಸಲ್ಲಿಸುವವರು ಯೋಜನೆಯಡಿ ಗುರುತಿಸಿರುವ ಯಾವುದಾದರೂ ಒಂದು ಯೋಜನೆಯಲ್ಲಿ ತಕ್ಕ ಮಟ್ಟಿನ ಪ್ರಾವಿಣ್ಯ ಸಾಧಿಸಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಫಲಾನುಭವಿ ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರಾಗಿರಬಾರದು. ಐದು ವರ್ಷದಲ್ಲಿ ಫಲಾನುಭವಿ ಒಂದು ವೇಳೆ ಮುದ್ರಾ ಯೋಜನೆ, ಪಿಎಂ ಇಜಿಪಿ, ಸ್ವನಿಧಿ ಯೋಜನೆಯಡಿ ಸಾಲ ಪಡೆದಿದ್ದರೆ ಅದನ್ನು ಸಕಾಲದಲ್ಲಿ ಮರುಪಾವತಿ ಮಾಡಿರಬೇಕು.
"

ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರ ಪ್ರಸ್ತಾವನೆಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. ಇದೇ ತಿಂಗಳಲ್ಲಿ ಪೋರ್ಟಲ್ ಮರು ಜಾರಿಯಾಗಲಿದ್ದು, ಮೊದಲ ಕಂತು ಪಾವತಿಸಿದ ಫಲಾನುಭವಿಗಳಿಗೆ ಎರಡನೇ ಕಂತು ದೊರೆಯಲಿದೆ.

ಹಿಂದೆ ಐದು ವೃತ್ತಿಗಳು
ಜಿಲ್ಲೆಯಲ್ಲಿ ಈವರೆಗೆ ಐದು ವೃತ್ತಿಗಳಲ್ಲಿ ಮಾತ್ರ ತರಬೇತಿ ನೀಡಲಾಗಿತ್ತು. ದೋಣಿ ತಯಾರಕರು. ಟೈಲರಿಂಗ್, ಮರಗೆಲಸ ಮಾಡುವುದು, ಮೀನಿನ ಬಲೆ ಸಿದ್ಧಪಡಿಸುವುದು, ಬೀಗ-ಕೀಲಿಕೈ ತಯಾರಿಕೆ ವೃತ್ತಿಯಲ್ಲಿರುವವರಿಗೆ ತರಬೇತಿ ನೀಡಲಾಗಿತ್ತು. ಟೈಲರಿಂಗ್‌ಗೆ ಸಂಬಂಧಿಸಿ 2,181 ಅರ್ಜಿ, ಹಾರ ತಯಾರಿಕೆಗೆ 1,635, ಮರಕೆಲಸಕ್ಕಾಗಿ 2,860 ಅರ್ಹರು ಸಾಲಕ್ಕೆಂದು ಅರ್ಜಿ ಸಲ್ಲಿಸಿದ್ದರು. ಎಲ್ಲ ಕಡೆಯೂ ಟೈಲರಿಂಗ್ ಹಾಗೂ ಮರಕೆಲಸಕ್ಕೆ ಹೆಚ್ಚು ಮಂದಿ ತರಬೇತಿಗೆ ಅರ್ಜಿ ಸಲ್ಲಿಸಿದ್ದರು. ಅನೇಕರು ತರಬೇತಿ ಪೂರ್ಣಗೊಳಿಸಲಿಲ್ಲ. ಸಾಲ ನೀಡುವ ಸಂದರ್ಭದಲ್ಲಿ ತರಬೇತಿ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯವವಾಗಿ ಒದಗಿಸಬೇಕು. ಇದೇ ಕಾರಣದಿಂದ ಅನೇಕರಿಗೆ ಸಾಲ ಮಂಜೂರಾಗಿಲ್ಲ.

ಜಿಲ್ಲೆಯ ಅಂಕಿ ಅಂಶ

ಸಲ್ಲಿಸಿದ ಅರ್ಜಿಗಳು-11192
ಸಾಲ ಮಂಜೂರಾದ ಅರ್ಜಿ- 5344
ಮಂಜೂರಾದ ಮೊತ್ತ- 47.99 ಕೋಟಿ ರೂ.
ವಿಲೇವಾರಿಯಾದ ಅರ್ಜಿ- 4654(38.96 ಕೋಟಿ ರೂ.)
ಮಂಜೂರು ಬಾಕಿ- 486(4.78 ಕೋಟಿ ರೂ.)
ಒಟ್ಟು ತಿರಸ್ಕೃತ- 5363(53.02 ಕೋಟಿ ರೂ.)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net