

ಶಿವಮೊಗ್ಗ: ವಚನಗಳು ಎಂದರೆ ಕೇವಲ ಸಾಹಿತ್ಯ ಅಲ್ಲ, ಅವು ಜೀವನ ದರ್ಶನ. ಈ ವಚನಗಳು ಇಡೀ ಜಗತ್ತಿಗೇ ದಾರಿದೀಪ ಆಗಬಲ್ಲ ಶಕ್ತಿ ಹೊಂದಿವೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ.ವಿ. ಧನಂಜಯ ಹೇಳಿದರು.
ಶಿವಮೊಗ್ಗ ಬಸವಕೇಂದ್ರದಲ್ಲಿ ಶುಕ್ರವಾರ ಸಂಜೆ ಚಿಂತನ ಕಾರ್ತಿಕ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಜನರಿಂದ ಜನರಿಗಾಗಿ ರಚನೆಯಾದ ಸಾಹಿತ್ಯ. ಇಡೀ ಜಗತ್ತಿನಲ್ಲಿ ಒಂದು ಸಮುದಾಯದಲ್ಲಿ ಈ ರೀತಿ ರಚನೆಯಾದ ಸಾಹಿತ್ಯ ಇಲ್ಲ ಎಂದು ಅಭಿಪ್ರಾಯಪಟ್ಟರು.
ಶರಣ ಕಾಯಕ ತತ್ವ ನಮ್ಮ ಪ್ರತಿ ದಿನದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ನಾವು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಇಂದಿಗೂ ದ್ವೇಷ- ಅಸೂಯೆ, ಅಸಮಾನತೆ, ಜಾತಿಯತೆ ಹೋಗಿಲ್ಲ. ಆದರೆ, ಅಂದಿನ ಕಾಲದಲ್ಲೇ ಬಸವಣ್ಣನವರು ಈ ಎಲ್ಲಾ ಕನಸುಗಳನ್ನು ನನಸು ಮಾಡಲು ದಿಟ್ಟ ಹೆಜ್ಜೆ ಇಟ್ಟವರು ಎಂದು ವಿಶ್ಲೇಷಿಸಿದರು.
ದಯವಿಲ್ಲದ ಧರ್ಮ ಅದಾವುದಯ್ಯ ಎಂದು ವಚನಕಾರರು ಹೇಳಿದ್ದಾರೆ. ದಯೆ ಕೇವಲ ಸಕಲ ಪ್ರಾಣಿಗಳ ಬಗ್ಗೆ ಮಾತ್ರವಲ್ಲದೆ ಭೂಮಿ ಮೇಲೆಯೂ ತೋರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನಗತ್ಯ, ಅವೈಜ್ಞಾನಿಕ ಕೀಟನಾಶಕ, ರಸಾಯನಿಕ ಬಳಕೆಯಿಂದ ಇಡೀ ಪರಿಸರವೇ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಭೂಮಿ ಬಗ್ಗೆ ದಯ ತೋರಬೇಕಾದ ಸಂದರ್ಭ ಇದಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಸವಕೇಂದ್ರದ ಶ್ರೀ ಡಾ. ಬಸವಮರುಳಸಿದ್ದ ಸ್ವಾಮೀಜಿ, ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ ಎಂಬುದು ಕೇವಲ ಬಸವಣ್ಣನವರ ಜೀವನ ಚರಿತ್ರೆ ತಿಳಿದುಕೊಳ್ಳುವುದಲ್ಲ. ಅವರ ಚಿಂತನೆ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಅನುಭವ, ಮಾನವೀಯ ಮೌಲ್ಯಗಳು ಮತ್ತು ಕ್ರಾಂತಿಕಾರಿ ವಿಚಾರಗಳೊಂದಿಗೆ ನಮ್ಮನ್ನು ನಾವು ಮುಖಾಮುಖಿಯಾಗುವ ಒಂದು ಚಿಂತನಶೀಲ ಪ್ರಯತ್ನವಾಗಿದೆ ಎಂದರು.
ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಒಂದು ವ್ಯಕ್ತಿಯನ್ನು ಅರಿಯುವುದಲ್ಲ. ಒಂದು ಯುಗದ ಚಿಂತನೆ, ಸಮಾಜ ಪರಿವರ್ತನೆಯ ಆಶಯ ಮತ್ತು ಮಾನವ ಘನತೆಯ ತತ್ವವನ್ನು ಅರಿಯುವುದಾಗಿದೆ. ಬಸವಣ್ಣ ಬದುಕಿನ ಬವಣೆಗಳಿಗೆ ಮುಖಾಮುಖಿಯಾಗುತ್ತ ಆತ್ಮಸಾಕ್ಷಿಗೆ ಬೆಲೆಕೊಟ್ಟು ಬಾಳಿದವರು. ಅವರ ವಿಚಾರಗಳೊಂದಿಗೆ ಮುಖಾಮುಖಿ ಯಾಗುವುದೆಂದರೆ ನಮ್ಮ ಆತ್ಮಸಾಕ್ಷಿಗೆ ಮುಖಾಮುಖಿ ಆಗುವುದು ಎಂದರ್ಥ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕ ರೂಪುಗೊಂಡಿದೆ. ಬಸವಣ್ಣನವರನ್ನು ವಿವಿಧ ಆಯಾಮಗಳಲ್ಲಿ ಮುಖಾಮುಖಿಯಾಗುವ ಈ ಚಿಂತನ ಕಾರ್ತಿಕ ಇಂದಿನ ಅತ್ಯಗತ್ಯವಾಗಿದೆ ಎಂದರು.
ಡಾ. ಕೆ.ಸಿ.ಶಶಿಧರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಚ್.ಪಿ.ಗಿರೀಶ್, ಸೂಡಾ ಅಧ್ಯಕ್ಷ ಮಧುಸೂದನ, ವಿದ್ಯುತ್ ಇಲಾಖೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ್, ಲವಕುಮಾರ್, ನಾಗರತ್ನ ಉಪಸ್ಥಿತರಿದ್ದರು.