

ಶಿವಮೊಗ್ಗ: ಸಾಮಾನ್ಯವಾಗಿ ಮನುಷ್ಯನ ಕೈ-ಕಾಲುಗಳು ಮುರಿದಾಗ ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಹಾಕಿ ಗುಣಪಡಿಸುವುದನ್ನು ನೋಡಿದ್ದೇವೆ. ಆದರೆ ದೇಶದಲ್ಲೇ ಮೊದಲೆಂಬಂತೆ ಕಾಲು ಮೂಳೆ ಮುರಿತಕ್ಕೆ ಒಳಗಾಗಿದ್ದ 35 ವರ್ಷದ ಬೃಹದಾಕಾರದ ಆನೆಗೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಅಳವಡಿಸುವ ಮೂಲಕ ಗುಣಪಡಿಸಿರುವುದಕ್ಕೆ ಸಕ್ರೆಬೈಲ್ ಬಿಡಾರ ಸಾಕ್ಷಿಯಾಗಿದೆ.
ಹಾಸನ ಜಿಲ್ಲೆಯಲ್ಲಿ ಹಲವರ ಬಲಿ ಪಡೆದಿದ್ದ ದ್ರೋಣ (ಅಡ್ಕಬಡ್ಕ) ಆನೆಯನ್ನು ಕಳೆದ ವರ್ಷ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬಳಿ ಸೆರೆ ಹಿಡಿದು ಶಿವಮೊಗ್ಗ ತಾಲೂಕು ಸಕ್ರೆಬೈಲು ಬಿಡಾರಕ್ಕೆ ತರಲಾಗಿತ್ತು. ಈ ವೇಳೆ ಕ್ರಾಲ್‌ನಲ್ಲಿ ಹಾಕಿದ್ದಾಗ ಬಿದ್ದು ತನ್ನ ಎಡಗಾಲಿನ ಮೂಳೆ ಮುರಿದುಕೊಂಡಿತ್ತು. ಅದು ಕುಂಟುತ್ತಾ ಓಡಾಡುವುದನ್ನು ಕಂಡ ಆನೆ ಬಿಡಾರದ ವೈದ್ಯರು ಪರೀಕ್ಷಿಸಿದಾಗ ಮೂಳೆ ಮುರಿತ ಕಂಡು ಬಂದಿತ್ತು.
ದ್ರೋಣನಿಗೆ ಮನುಷ್ಯರಿಗೆ ಹಾಕುವ ಪಿಒಪಿಯ ಕಾಸ್ಟಿಂಗ್ ಮಾಡಿದರೆ ಅದರ ಭಾರಕ್ಕೆ ಪುಡಿಯಾಗುತ್ತದೆ. ಅಲ್ಲದೆ, ನೀರು ಬಿದ್ದರೆ ಕಾಲು ಬೇಗ ಗುಣವಾಗುವುದಿಲ್ಲ ಎಂದು ಅರಿತ ವೈದ್ಯರು ದ್ರೋಣನ ಕಾಲಿಗೆ ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಮಾಡಿದ್ದರು. ಇದು ಸ್ಪಲ್ಪ ಫ್ಲೆಕ್ಸಿಬಲ್ ಆಗಿದ್ದು ಹೆಚ್ಚು ಭಾರವಿಲ್ಲ. ನೀರು ಬಿದ್ದರೂ ಸಮಸ್ಯೆ ಆಗುವುದಿಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು ಫೈಬರ್ ಗ್ಲಾಸ್ ಕ್ಯಾಸ್ಟಿಂಗ್ ಮಾಡಿದ್ದರು. ದ್ರೋಣನಿಗೆ ಒಂದು ತಿಂಗಳು ಕ್ಯಾಸ್ಟಿಂಗ್ ಹಾಕಲಾಗಿತ್ತು. ಕೇವಲ 80 ಸಾವಿರ ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ದ್ರೋಣ ಬೇಗ ಗುಣವಾಗಲಿ ಎಂದು ಹೈಡ್ರೋ ಥೆರಪಿ ಮಾಡಲಾಗಿತ್ತು. ಆನೆಯನ್ನು ನೀರಿನಲ್ಲಿ ಬಿಟ್ಟಾಗ ದೇಹದ ಭಾರ ಕಡಿಮೆ ಆಗುತ್ತದೆ. ಅಲ್ಲಿ ಆನೆ ಸಹಜವಾಗಿ ತನ್ನ ಕಾಲನ್ನು ಹಿಂದೆ ಮುಂದೆ ಮಾಡುತ್ತದೆ. ಇದರಿಂದ ಮೂಳೆ ಬೇಗ ಕೂಡಿಕೊಳ್ಳಲು ಅನುಕೂಲವಾಗಿದೆ. ಸತತ 5 ತಿಂಗಳು ಕ್ರಾಲ್ನಲ್ಲಿಯೇ ಇಟ್ಟುಕೊಂಡು ಅದು ಸಂಪೂರ್ಣವಾಗಿ ತನ್ನ ಕಾಲಿನ ಮೇಲಿಯೇ ನಿಂತು ಓಡಾಡುವಂತೆ ಇತರ ಆನೆಗಳ ಜತೆ ಬಿಡಲಾಗಿದೆ. ಸದ್ಯ ದ್ರೋಣ ಆನೆ ಸಂಪೂರ್ಣ ಚೇತರಿಕೆ ಕಂಡಿದೆ. ಈಗ ಅದು ಮೊದಲಿನಂತೆ ಆರಾಮವಾಗಿ ಓಡಾಡಿಕೊಂಡಿದೆ. ಈಗ ಇದು ಇತರ ಆನೆಗಳೊಂದಿಗೆ ನಿತ್ಯ ಕಾಡಿಗೆ ಹೋಗಿ ಬರುತ್ತಿದೆ.
ಸಕ್ರೆಬೈಲು ಆನೆ ವೈದ್ಯರ ಈ ಸಾಹಸ ಭಾರತದಲ್ಲಿ ಮೊದಲು ಎನ್ನಲಾಗಿದೆ. ಮೊದಲು ಶ್ರೀಲಂಕಾದಲ್ಲಿ ಆನೆ ಮರಿಗೆ ಇದೇ ರೀತಿಯ ಚಿಕಿತ್ಸೆ ಮಾಡಿದ್ದರು. ಆದರೆ ದೊಡ್ಡ ಆನೆಗೆ ಇದೇ ಮೊದಲ ಬಾರಿಗೆ ಈ ರೀತಿಯ ಚಿಕಿತ್ಸೆ ನೀಡಲಾಗಿದೆ. ಸಕ್ರೆಬೈಲು ಆನೆ ಬಿಡಾರದ ಡಾ. ಮುರುಳಿ ಮನೋಹರ್ ಅವರಿಗೆ ತುಮಕೂರು ಪಶು ವೈದ್ಯ ಡಾ.ಮಹೇಶ್ ಸೇರಿ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಪಟಗಾರ್, ಬಿಡಾರದ ಆರ್‌ಎಫ್‌ಒ, ಮಾವುತರು, ಕಾವಾಡಿಗಳು ನೆರವಾಗಿದ್ದರು. ದ್ರೋಣ ಆನೆಗೆ ಮೊದಲು ಚುಚ್ಚುಮದ್ದು ನೀಡಿ, ಅದಕ್ಕೆ ಸುಮಾರು 2 ಗಂಟೆ ಚಿಕಿತ್ಸೆ ನೀಡಲಾಗಿತ್ತು. ಸಕ್ರೆಬೈಲು ಆನೆ ಬಿಡಾರದ ವೈದ್ಯರ ಈ ಪ್ರಯೋಗ ಮೊದಲ ಬಾರಿಯಾಗಿದ್ದರೂ ಯಶಸ್ವಿಯಾಗಿದ್ದು ಪ್ರಾಣಿಪ್ರಿಯಯಲ್ಲಿ ಸಂತಸ ತಂದಿದೆ.