ಹುಲಿಕಲ್ ಘಾಟ್ ದುರಂತ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸ್ಥಳಿಯರಾದ ತರುವೆ ಕೃಷ್ಣ, ಗೋಪಾಲ ಅರಮನೆಕೊಪ್ಪ, ಶಶಿಕಿರಣ, ಶ್ರೇಯಾಂಕ್ ಒಳಗೊಂಡ ನಿಯೋಗ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮೂಲಕ ಮನವಿ ಸಲ್ಲಿಸಿದೆ. ಈ ವೇಳೆ ಹಾಜರಿದ್ದ ಶಾಸಕ ಆರಗ ಜ್ಞಾನೇಂದ್ರ ಕೂಡ ಕಾಮಗಾರಿ ವಿಳಂಬ, ಸಂಪರ್ಕ ಸಂಕಷ್ಟದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರು ಸೂಕ್ತ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸೇತುವೆ ಜತೆಯಲ್ಲೇ ಮಂಜೂರಾದ ಕೊಪ್ಪ, ಎನ್.ಆರ್.ಪುರ ಸೇತುವೆಗಳು ಪೂರ್ಣವಾಗಿ ಸಿಎಂ ಉದ್ಘಾಟನೆ ಮಾಡಿದ್ದಾರೆ. ಸ್ವಲ್ಪ ದೂರದಲ್ಲಿರುವ ನೂರಾರು ಕೋಟಿ ರೂ. ವೆಚ್ಚದ ಹಸಿರುಮಕ್ಕಿ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಬಿಲ್ಸಾಗರ ಸೇತುವೆ ಬಗ್ಗೆ ಯಾಕಿಷ್ಟು ಕಡೆಗಣನೆ ಎಂಬುದು ಜನರ ಪ್ರಶ್ನೆ.