ದೇಶದ ಪ್ರಧಾನಿ ಕುರ್ಚಿ ವಿದೇಶದಲ್ಲಿಲ್ಲ Shobha Karandlaje

ಶಿವಮೊಗ್ಗ: ನಮ್ಮದು ಪ್ರಜಾತಂತ್ರ ವ್ಯವಸ್ಥೆ. ಈ ದೇಶದ ಪ್ರಧಾನಿ ಕುರ್ಚಿ ವಿದೇಶದಲ್ಲಿಲ್ಲ, ಹಾದಿಬೀದಿಯಲ್ಲೂ ಇಲ್ಲ ಎಂಬುದನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
Shobha Karandlaje
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಸತತ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಸಿ.ಟಿ.ರವಿ, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ ಮತ್ತಿತರರು ಹೆಜ್ಜೆಹಾಕಿದರು.
Published on: 

ಶಿವಮೊಗ್ಗ: ನಮ್ಮದು ಪ್ರಜಾತಂತ್ರ ವ್ಯವಸ್ಥೆ. ಈ ದೇಶದ ಪ್ರಧಾನಿ ಕುರ್ಚಿ ವಿದೇಶದಲ್ಲಿಲ್ಲ, ಹಾದಿಬೀದಿಯಲ್ಲೂ ಇಲ್ಲ ಎಂಬುದನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಕೂತು ಭಾರತದ ವ್ಯವಸ್ಥೆ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ಭಾರತದ ಮರ್ಯಾದೆ ತೆಗೆಯಲು ಇವರು ವಿದೇಶಿಕರ ಜತೆ ಕೈಜೋಡಿಸಿದ್ದಾರೆ ಎಂದು ದೂರಿದರು.

ಚರ್ಚೆ ಮಾಡಬೇಕಾದರೆ ಸಂಸತ್ ಅಧಿವೇಶಕ್ಕೆ ಬರಬೇಕು. ನೀವು ಪ್ರತಿಪಕ್ಷ ನಾಯಕರಾಗಿದ್ದೀರಿ. ಪ್ರತಿಪಕ್ಷ ನಾಯಕನ ಸ್ಥಾನ ಪ್ರಧಾನಿಗಿರುವಷ್ಟೇ ಪವರ್‌ಫುಲ್ ಆಗಿದೆ. ಆದರೆ ನೀವು ವಿದೇಶದಲ್ಲಿ ಕುಳಿತು ಭಾರತದ ನೆಲದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ. ಈ ದೇಶದ ಜನ ಒಪ್ಪಿಕೊಂಡರೆ ನೀವು ಪ್ರಧಾನಿ ಆಗಬಹುದು. ಆದರೆ ನಿಮ್ಮಲ್ಲಿ ಸಭ್ಯತೆ ಕಾಣುತ್ತಿಲ್ಲ ಎಂದು ಲೇವಡಿ ಮಾಡಿದರು.

ಚುನಾವಣಾ ಆಯೋಗದ ಬಗ್ಗೆ ಈವರೆಗೂ ಯಾರು ಪ್ರಶ್ನೆ ಮಾಡಿಲ್ಲ. ಇವಿಎಂ ಯಾವ ಕಾಲದಲ್ಲಿ ಬಂದಿದ್ದು ಎಂಬುದು ನಿಮ್ಮಗೆ ಗೊತ್ತಿಲ್ಲವೇ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ ಸಚಿವರು, ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಗೆದ್ದಾಗ ಇವಿಎಂ ಸರಿ ಇತ್ತು. ಬಿಜೆಪಿ ಗೆದ್ದ ಕಡೆಗಳಲ್ಲಿ ಇವಿಎಂ ಸರಿಯಿಲ್ಲ ಎಂಬುದು ಕಾಂಗ್ರೆಸ್‌ನ ಇಬ್ಬಗೆ ನೀತಿ ಆಗಿದೆ ಎಂದರು.

ದೇಶವನ್ನು ಕಾಪಾಡಲು 140 ಕೋಟಿ ಜನರಿದ್ದಾರೆ. ನಿಮ್ಮಗೆ ಇಟಲಿ ಇದೆ. ನಾವು ಈ ದೇಶದಲ್ಲಿ ಇದ್ದೇವೆ. ಈ ದೇಶದಲ್ಲಿ ಸಾಯಲು ಸಿದ್ದರಿದ್ದೇವೆ. ನಾವು ಇಲ್ಲಿ ಹುಟ್ಟು ಬೆಳೆದವರು, ನಾವು ಇಲ್ಲೇ ಬದುಕಬೇಕಿದೆ. ಜನರ ಮನಸ್ಸು ಗೆದ್ದು ಪ್ರಧಾನಿಯಾಗಬೇಕೋ ವಿನಃ ಹಾದಿಬೀದಿಯಲ್ಲಿ ಗುಂಪುಕಟ್ಟಿಕೊಂಡು ಹೋರಾಟ ಮಾಡುವುದರಿಂದ ಆಗುವುದಿಲ್ಲ. ಈ ದೇಶದಲ್ಲಿ ಮುಂದೆಯೂ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಸವಾಲು ಹಾಕಿದರು.