ದೇಶಕ್ಕಾಗಿ ಬದುಕು ಸಮರ್ಪಿಸಿದ ವೀರ ವಿವೇಕಾನಂದ I vivrkananda jayanti

ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನ ಉದ್ಘಾಟನೆಯಲ್ಲಿ ಎಸ್.ಎನ್.ಚನ್ನಬಸಪ್ಪ, ಬಲ್ಕಿಶ್ ಬಾನು, ಪ್ರಭುಲಿಂಗ ಕವಳಿಕಟ್ಟಿ, ವಿ.ಅಭಿಷೇಕ್, ಎಚ್.ಉಮೇಶ್, ನಾಗೇಂದ್ರಕುಮಾರ್ ಬಾಬು, ಮೇಘಾ ಅಗರ್ವಾಲ್ ಇತರರಿದ್ದರು.
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನ ಉದ್ಘಾಟನೆಯಲ್ಲಿ ಎಸ್.ಎನ್.ಚನ್ನಬಸಪ್ಪ, ಬಲ್ಕಿಶ್ ಬಾನು, ಪ್ರಭುಲಿಂಗ ಕವಳಿಕಟ್ಟಿ, ವಿ.ಅಭಿಷೇಕ್, ಎಚ್.ಉಮೇಶ್, ನಾಗೇಂದ್ರಕುಮಾರ್ ಬಾಬು, ಮೇಘಾ ಅಗರ್ವಾಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ
  • ಯುವಜನರಿಗೆ ಕಾರ್ಯಾಗಾರ
  • ದೇಶದ ಯುವ ಸಮೂಹಕ್ಕೆ ಮಾರ್ಗದರ್ಶಕ
  • ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣನೆ
ಶಿವಮೊಗ್ಗ: ಭಾರತ ದೇಶ (country) ಎಂಬುದು ಪುಣ್ಯಭೂಮಿ, ಮಾತೃಭೂಮಿ ಎಂಬ ಅರಿವು ನೀಡಿದವರು ಸ್ವಾಮಿ ವಿವೇಕಾನಂದರು. ನಮ್ಮ ಮಣ್ಣು (soil), ನೆಲ, ಜಲ, ದೇಶದ ಕುರಿತು ಅಪಾರ ಪ್ರೇಮ ಹೊಂದಿದ್ದ ಅವರು ಯುವಜನತೆ (youths) ಯಲ್ಲಿರುವ ಅಪಾರ ಶಕ್ತಿ ಅರಿತಿದ್ದರು. ಯುವಜನರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಅಂಗವಾಗಿ ಜಿಲ್ಲಾಡಳಿತ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಯುವಜನತೆಗೆ ಐಎಎಸ್ ಮತ್ತು ಐಪಿಎಸ್ ಕುರಿತ ತರಬೇತಿ ಕಾರ್ಯಾಗಾರ, ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿ ಯುವಜನತೆಗೆ ಮಾದರಿಯಾಗಿದ್ದಾರೆ. ಅವರನ್ನು ನೆನೆದರೆ ಹಿಂದೂ ಸಂಸ್ಕೃತಿ, ಪರಂಪರೆ ನೆನಪಾಗುತ್ತದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು. ಅವರೊಂದು ವಿಶ್ವವಿದ್ಯಾಲಯದಂತಿದ್ದರು. ದೇಶಭಕ್ತಿ, ಪ್ರಾಮಾಣಿಕತೆ ಮತ್ತು ನಂಬಿಕೆ ಪ್ರತೀಕವಾಗಿದ್ದಾರೆ. ಯುವಜನರು ಎಷ್ಟೋ ಪ್ರಶ್ನೆಗಳಿಗೆ ವಿವೇಕಾನಂದರ ಮೂಲಕ ಉತ್ತರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಯುವಜನರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇತರರಿದ್ದರು.

ಮಾದಕ ವಸ್ತುಗಳಿಂದ ದೂರವಿರಿ

ಮನೆಯಿಂದಲೇ ನಮ್ಮ ವ್ಯಕ್ತಿತ್ವ ಉತ್ತಮವಾಗಿ ವಿಕಸನವಾಗಬೇಕು. ಯುವಜನತೆ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡರೆ ಅದೇ ದೇಶಕ್ಕೆ ದೊಡ್ಡ ಕೊಡುಗೆ. ಇಂದಿನ ಯುವಜನತೆಗೆ ಎಲ್ಲ ರೀತಿ ಸೌಲಭ್ಯಗಳು ಸಿಗುತ್ತಿದ್ದು, ಒಳ್ಳೆಯ ಶಿಕ್ಷಣ ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳಿಂದ ದೂರ ಇರಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ತಿಳಿಸಿದರು.

ಜೀವನೋತ್ಸಾಹ ಅಗತ್ಯ

ಯಾವುದೇ ಕ್ಷೇತ್ರವಿರಲಿ, ಏನೇ ಕೆಲಸ ಮಾಡುತ್ತಿರಲಿ ಜೀವನೋತ್ಸಾಹ ಬಹಳ ಮುಖ್ಯ. ಕೆಲಸದಲ್ಲಿ ಸಂಪೂರ್ಣ ತೊಡಗಿಕೊಂಡಲ್ಲಿ ಯಶಸ್ಸು ಹೆಚ್ಚಿರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಉತ್ತಮ ವ್ಯಕ್ತಿತ್ವದ, ಉದಾತ್ತ ಚಿಂತನೆಗಳ, ಮೌಲ್ಯಗಳ ಶ್ರೀಮಂತಿಕೆ ಹೊಂದಬೇಕು. ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಯುವಜನರು ಸದಾ ಕಲಿಕೆಯಲ್ಲಿ ಉತ್ಸುಕರಾಗಿರಬೇಕು. ನಿಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಉತ್ತಮ ಮಾರ್ಗ ಹಿಡಿದು ಮಾನಸಿಕವಾಗಿ ಮುತ್ತು ದೈಹಿಕವಾಗಿ ದುಶ್ಚಟಗಳಿಂದ ದೂರವಿರಬೇಕು ಎಂದರು.

ವಿದ್ಯಾರ್ಥಿಗಳಿಗೆ ಮಾಹಿತಿ

ಯುವಜನರಿಗೆ ಐಎಸ್‌ಎಸ್, ಐಪಿಎಸ್ ಸಿದ್ಧತೆ ಕುರಿತು ವಿಶೇಷ ಕಾರ್ಯಾಗಾರ ನಡೆಸಲಾಯಿತು. ಐಎಎಸ್ ಪ್ರೊಬೆಷನರಿ ಅಧಿಕಾರಿ ನಾಗೇಂದ್ರ ಕುಮಾರ್ ಬಾಬು, ಐಎಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ ಎದುರಿಸುವುದು ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಐಪಿಎಸ್ ಪ್ರೊಬೆಷನರಿ ಅಧಿಕಾರಿ ಮೇಘಾ ಅಗರ್ವಾಲ್, ಐಪಿಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಕುರಿತು ವಿವರಿಸಿದರು. ಸೈಬರ್ ಕ್ರೈಂ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಮಾದಕ ವಸ್ತುಗಳ ದುಷ್ಪರಿಣಾಮಗಳು, ಎನ್‌ಡಿಪಿಎಸ್ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯುವ ಸಪ್ತಾಹ ಅಂಗವಾಗಿ ತಾಲೂಕು ಮಟ್ಟದಲ್ಲಿ ಏರ್ಪಡಿಸಿದ್ದ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net