ಯುದ್ಧ ಪರಿಣಾಮ ಸಾಮಾನ್ಯರ ಮೇಲೆ I war effect

 ಶಿವಮೊಗ್ಗದಲ್ಲಿ ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಯುದ್ಧದ ಒಳ-ಹೊರಗು ಸಂವಾದ ಕಾರ್ಯಕ್ರಮದಲ್ಲಿ  ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿದರು. ಸವಿತಾ ನಾಗಭೂಷಣ, ವೈ.ಎಚ್.ಸ್ಫೂರ್ತಿ, ಮುಸ್ತಫಾ ಬೇಗ್ ಇದ್ದರು.
ಶಿವಮೊಗ್ಗದಲ್ಲಿ ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಯುದ್ಧದ ಒಳ-ಹೊರಗು ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿದರು. ಸವಿತಾ ನಾಗಭೂಷಣ, ವೈ.ಎಚ್.ಸ್ಫೂರ್ತಿ, ಮುಸ್ತಫಾ ಬೇಗ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ. ರಾಜೇಂದ್ರ ಚೆನ್ನಿ ಅಭಿಮತ
  • ಬಹುಮಖಿ ಸಂಘಟನೆಯಿಂದ ಸಂವಾದ
ಶಿವಮೊಗ್ಗ: ಭೂಮಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹಪಾಹಪಿ. ಶ್ರೀಮಂತಿಕೆ ಬಯಸುವ ಕೆಲವೇ ಮಂದಿಯ ಕಾರಣದಿಂದ ಯದ್ಧಗಳು (wars) ಸಂಭವಿಸುತ್ತವೆ. ಈಗ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯದ್ಧಗಳಿಗೆ ತೈಲವೇ (oil) ಪ್ರಮುಖ ಕಾರಣ (reason) ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಬಹುಮಖಿ ಸಂಘಟನೆಯಿಂದ ಬುಧವಾರ ಏರ್ಪಡಿಸಿದ್ದ ಯುದ್ಧದ ಒಳ-ಹೊರಗು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನಶೈಲಿ, ಆಧುನಿಕತೆ. ಐಷಾರಾಮಿತನ ಎಲ್ಲದಕ್ಕೂ ತೈಲದ ಅವಶ್ಯಕತೆಯಿದೆ. ಇಲ್ಲಿ ಇರಾನ್‌ನ ನಾಯಕತ್ವ ಬದಲಾವಣೆ ಎಂಬುದು ನೆಪ ಮಾತ್ರ ಎಂದು ವಿಶ್ಲೇಷಿಸಿದರು.
ಮನುಷ್ಯ ಬೇರೆ ಬೇರೆ ದುಶ್ಚಟಗಳ ವ್ಯಸನ ಬಳಸಿಕೊಂಡಂತೆ ದೇಶಗಳು ಯುದ್ಧ ವ್ಯಸನಿಗಳಾಗುತ್ತಿವೆ. ಯುದ್ಧ ಎಂಬುದು ಪುರಾಣ ಇಲ್ಲವೇ ಒಂದು ರೀತಿಯ ಭ್ರಮೆ. ಇಲ್ಲಿ ರಾಜಕಾರಣಿಗಳು, ಮಾಧ್ಯಮಗಳು, ಬುದ್ಧಿಜೀವಿ ವಲಯಗಳು ಸೇರಿ ಯುದ್ಧದ ಭ್ರಮೆ ಸೃಷ್ಟಿ ಮಾಡುತ್ತಾರೆ ಎಂದು ಹೇಳಿದರು.
ಹಾಗೆ ನೋಡಿದರೆ ಯಾವ ಯದ್ಧವೂ ನ್ಯಾಯಬದ್ಧವಲ್ಲ. ಆಯಾ ದೇಶಗಳು ತಮಗೆ ಅನುಕೂಲ ಆಗುವಂತೆ ಯದ್ಧವನ್ನು ವಿಶ್ಲೇಷಿಸುತ್ತವೆ. ಯುದ್ಧಗಳಲ್ಲಿ ಸಾಯುವವರಿಗೆ ಯಾವ ಪ್ರಯೋಜನವೂ ಇಲ್ಲ. ಯುದ್ಧದ ಸಂದರ್ಭದಲ್ಲಿ ಹಾಗೂ ನಂತರ ನಷ್ಟ ಅನುಭವಿಸುವವರು, ಭೂಮಿಯನ್ನು ಕಳೆದುಕೊಳ್ಳುವವರು ಕೃಷಿಕರು ಹಾಗೂ ಸಾಮಾನ್ಯ ಜನರು ಎಂಬುದು ಬೇಸರದ ಸಂಗತಿ ಎಂದರು.
ತನ್ನ ಸಂಕುಲವನ್ನು ತಾನೇ ನಾಶ ಮಾಡುವ ಭೂಮಿ ಮೇಲಿನ ಏಕೈಕ ಪ್ರಾಣಿ ಎಂದರೆ ಅದು ಮನುಷ್ಯ ಮಾತ್ರ. ರಾಜಕೀಯ ಹಾಗೂ ಆರ್ಥಿಕ ಕಾರಣಗಳಿಗಾಗಿಯೇ ಯುದ್ಧಗಳು ನಡೆಯುತ್ತವೆ ಎಂಬುದು ವಾಸ್ತವ. ಬಿಲ್ಲು-ಬಾಣದ ಯುಗದಿಂದ ಡ್ರೋನ್, ರಾಕೆಟ್‌ವರೆಗೆ ನಾವು ಯುದ್ಧದಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ವೈ.ಎಚ್.ಸ್ಫೂರ್ತಿ, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ಬೇಗ್ ಯುದ್ಧದ ಕುರಿತು ಅನಿಸಿಕೆ ಹಂಚಿಕೊಂಡರು.
"

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ವಿರೋಧಿಸಿ ನಾವೆಲ್ಲರೂ ಸೇರಿ ಪ್ರತಿಭಟನೆ ನಡೆಸಬೇಕೆಂದರೆ ಅದಕ್ಕೆ ರಾಜ್ಯ ಸರ್ಕಾರ ಅವಕಾಶವನ್ನೇ ನೀಡಲಿಲ್ಲ. ಇಸ್ರೇಲ್ ಭಾರತದ ಮಿತ್ರ ದೇಶವಾದ ಕಾರಣ ಆ ದೇಶದ ವಿರುದ್ಧ ಪ್ರತಿಭಟನೆ ನಡೆಸುವಂತಿಲ್ಲ ಎಂದು ತಿಳಿಸಲಾಯಿತು.

ಮಹಾಭಾರತದಲ್ಲಿ ಯುದ್ಧದ ಪರಿಣಾಮ ಅನಾವರಣ

ಜಗತ್ತಿನ ಎಲ್ಲ ಭಾಷೆಗಳಲ್ಲಿ ಯುದ್ಧ ವಿರೋಧಿ ಶ್ರೇಷ್ಠ ಕಾವ್ಯಗಳು ಪ್ರಕಟಗೊಂಡಿವೆ. ಎಲ್ಲ ಕವಿಗಳೂ ಯುದ್ಧವನ್ನು ವಿರೋಧಿಸಿದ್ದಾರೆ. ಹಾಗೆ ನೋಡಿದರೆ ಮಹಾಭಾರತ ಕೂಡಾ ಯುದ್ಧದ ಬಗೆಗಿನ ಕಾವ್ಯವಲ್ಲ. ಅದು ಯುದ್ಧ ವಿರೋಧಿ ಕಾವ್ಯ. ಯುದ್ಧ ಎಷ್ಟು ವಿನಾಶಕಾರಿ. ಅದರ ಅಂತಿಮ ಪರಿಣಾಮದ ಭೀಕರತೆಯನ್ನು ಅದು ಸಾರುತ್ತದೆ ಎಂದು ಪ್ರೊ. ರಾಜೇಂದ್ರ ಚೆನ್ನಿ ವಿವರಿಸಿದರು. ಮನುಷ್ಯ ಯುದ್ಧ ಮಾಡುವುದೇಕೆ? ಅಂತಿಮವಾಗಿ ಏನು ಉಳಿಯುತ್ತದೆ ಎಂಬ ಪ್ರಶ್ನೆಯನ್ನು ಮಹಾಭಾರತ ನಮ್ಮಲ್ಲಿ ಮೂಡಿಸುತ್ತದೆ. ಮಹಾಭಾರತದ ಯುದ್ಧದಲ್ಲಿ ಗೆದ್ದವರು ಸಂಭ್ರಮಿಸಲಿಲ್ಲ. ಶೌರ್ಯ ತೋರಿದವರೆ ಮೆರೆಯಲಿಲ್ಲ. ಎಲ್ಲರೂ ಸೋತವರಂತೆಯೇ ಮಾತನಾಡಿದರು. ಯುದ್ಧದಲ್ಲಿ ಮಡಿದ ತಮ್ಮವರಿಗಾಗಿ ಗಾಂಧಾರಿ, ಕುಂತಿ, ದ್ರೌಪದಿ ಎಲ್ಲರೂ ಕಣ್ಣೀರು ಹಾಕಿದರು. ಇದು ಯುದ್ಧದ ವಿನಾಶಕ್ಕೆ ಸೂಕ್ತ ನಿದರ್ಶನ ಎಂದರು.

ಅನೇಕ ರಾಷ್ಟ್ರಗಳಲ್ಲಿ ಪ್ರತಿಭಟನೆ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ವಿರೋಧಿಸಿ ಅನೇಕ ದೊಡ್ಡ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಬಲ ನಾಯಕರಿಂದಲೂ ಈ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಯುದ್ಧ ವಿರೋಧಿಸುವ ಸಾಮಾನ್ಯ ಜನರ ಅನಿಸಿಕೆಗೆ ಎಲ್ಲೂ ಮನ್ನಣೆ ಸಿಗುತ್ತಿಲ್ಲ ಎಂದು ಕವಯಿತ್ರಿ ಸವಿತಾ ನಾಗಭೂಷಣ ಬೇಸರ ವ್ಯಕ್ತಪಡಿಸಿದರು. ಪ್ಯಾಲಿಸ್ತೇನ್‌ನಲ್ಲಿ ಸಾವಿಗೀಡಾದ ಸಾವಿರಾರು ಮಂದಿಯಲ್ಲಿ ಮಕ್ಕಳು, ಮಹಿಳೆಯರು, ರೈತರು, ಬಡ ಜನರೂ ಇದ್ದರು. ಇವೆಲ್ಲಾ ಕೇವಲ ಸರ್ಕಾರಗಳು ತೋರಿಸುವ ಅಂಕಿ ಅಂಶಗಳಷ್ಟೇ. ವಾಸ್ತವದಲ್ಲಿ ಸಾವು-ನೋವಿನ ಪ್ರಮಾಣ ಬಹಳಷ್ಟಿರುತ್ತದೆ. ಆಪರೇಷನ್ ಬ್ಲೂಸ್ಟಾರ್ ಹೆಸರಿನಲ್ಲಿ ಪಂಜಾಬ್‌ನಲ್ಲಿ 1980ರ ದಶಕದಲ್ಲಿ ನಮ್ಮವರೇ ನಮ್ಮವರನ್ನು ಸಾಯಿಸಿದ್ದು, ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆದ ಸಾವು, ನೋವುಗಳು, ಮಣಿಪುರದಲ್ಲಿ ನಡೆದ ಹತ್ಯಾಕಾಂಡ ಎಲ್ಲವೂ ತಲ್ಲಣ ಮೂಡಿಸುವ ಸಂಗತಿಗಳೇ ಆಗಿವೆ ಎಂದರು. ಭಾರತದ ಸ್ವಾತಂತ್ರೃ ಹೋರಾಟದಲ್ಲಿ ಗಾಂಧೀಜಿ ಯುದ್ಧದ ಮಾರ್ಗ ಅನುಸರಿಸಲಿಲ್ಲ. ಒಂದು ವೇಳೆ ಅಹಿಂಸೆ ಬದಲು ಯುದ್ಧವೇ ಅವರ ಆಯ್ಕೆಯಾಗಿದ್ದರೆ ನಮ್ಮಲ್ಲೂ ಕೋಟ್ಯಂತರ ಮಂದಿ ಸಾವಿಗೀಡಾಗುತ್ತಿದ್ದರು ಎಂದು ಹೇಳಿದರು.
"

ಯುದ್ಧವನ್ನು ಸಂಭ್ರಮಿಸುವ ಮನಸ್ಥಿತಿ ಬಹಳ ಹಿಂದಿನ ಕಾಲದಿಂದಲೇ ಮನುಷ್ಯರಿಗೆ ಬಂದು ಬಿಟ್ಟಿದೆ. ಅನೇಕ ರಾಜರ ಆಳ್ವಿಕೆಗಳು ಆರಂಭಗೊಳ್ಳಲು, ಅಂತ್ಯವಾಗಲು ಯುದ್ಧವೇ ಕಾರಣವಾಯಿತು. ಈಗ ನಡೆಯುತ್ತಿರುವ ಯುದ್ಧದ ಯುವಜನರ ಭವಿಷ್ಯಕ್ಕೆ ಮಾರಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net