ಶಿಕಾರಿಪುರ: ಗುರುಗಳೆಂದರೆ ನಮ್ಮ ಬದುಕನ್ನು ಪರಿಶುದ್ಧಗೊಳಿಸುವ ಮಹಾನ್ ಚೇತನಗಳು ಎಂದು ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಪಾಪಯ್ಯ ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಅತ್ಯಂತ ಪರಿಶ್ರಮದಿಂದ ವಿದ್ಯೆ ಪಡೆಯಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜ್ಞಾನಧಾರೆ ಎರೆಯುವ ಶಿಕ್ಷಕರ ಪಾತ್ರ ಮುಖ್ಯವಾದುದು. ತಾಂತ್ರಿಕ ಯುಗದಲ್ಲೂ ಗುರುಗಳ ಬಗ್ಗೆ ವಿದ್ಯಾರ್ಥಿಗಳು ಇಟ್ಟಿರುವ ಗೌರವ ಸ್ಮರಣೀಯ ಎಂದರು.
ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆ ಸಂಸ್ಕಾರ ಬೆಳೆಸಿಕೊಂಡು ಪಾಲಕರು ಹಾಗೂ ಗುರುಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ವಿವಿಧ ಆಟೋಟ ನಡೆಸಲಾಯಿತು. ಸಂರಕ್ಷಣಾಧಿಕಾರಿ ರತ್ನಮ್ಮ, ಕಾರ್ಯದರ್ಶಿ ಪವಿತ್ರಾ, ಖಜಾಂಚಿ ಪಲ್ಲವಿ, ಪ್ರಾಚಾರ್ಯ ಮುಸ್ತಫಾ, ಬಾಪೂಜಿ ವಿದ್ಯಾಸಂಸ್ಥೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.