ರಾಜಕೀಯ ಲಾಭಕ್ಕಾಗಿ ಸ್ಟಿಂಗ್ ಆಪರೇಷನ್‌ Sting Operation

ಶಿವಮೊಗ್ಗ: ರಾಜಕೀಯ ಲಾಭಕ್ಕಾಗಿ ಸ್ಟಿಂಗ್ ಆಪರೇಷನ್‌ನಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದ್ದು, ಪ್ರಕರಣದ ಹಿಂದಿರುವ ಸೂತ್ರಧಾರರ ಪತ್ತೆಗೆ ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ವಿಧಾನಸಭೆ ಉಪನಾಯಕಿ, ಶಾಸಕಿ ಶಾರದಾ ಪೂರ್ಯನಾಯ್ಕ್ ಆಗ್ರಹಿಸಿದರು.
Sting Operation
ಶಿವಮೊಗ್ಗದಲ್ಲಿ ಜೆಡಿಎಸ್ ವಿಧಾನಸಭೆ ಉಪನಾಯಕಿ, ಶಾಸಕಿ ಶಾರದಾ ಪೂರ್ಯನಾಯ್ಕ್ ಸುದ್ದಿಗೋಷ್ಠಿ ನಡೆಸಿದರು. ಕೆ.ಬಿ.ಪ್ರಸನ್ನಕುಮಾರ್, ಕೆ.ಎನ್.ರಾಮಕೃಷ್ಣ, ಡಾ. ಕಡಿದಾಳ್ ಗೋಪಾಲ್, ಗೀತಾ ಸತೀಶ್ ಇದ್ದರು.
Published on: 

ಶಿವಮೊಗ್ಗ: ರಾಜಕೀಯ ಲಾಭಕ್ಕಾಗಿ ಸ್ಟಿಂಗ್ ಆಪರೇಷನ್‌ನಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದ್ದು, ಪ್ರಕರಣದ ಹಿಂದಿರುವ ಸೂತ್ರಧಾರರ ಪತ್ತೆಗೆ ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ವಿಧಾನಸಭೆ ಉಪನಾಯಕಿ, ಶಾಸಕಿ ಶಾರದಾ ಪೂರ್ಯನಾಯ್ಕ್ ಆಗ್ರಹಿಸಿದರು.

ರಾಜಕೀಯದಲ್ಲಿ ಟೀಕೆ, ಆರೋಪಗಳು ಸಹಜ. ಆದರೆ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುವುದು ಸರಿಯಲ್ಲ. ಅಧಿಕಾರದ ಆಸೆಗಾಗಿ ಹೆಣ್ಣುಮಕ್ಕಳನ್ನು, ಕುಟುಂಬಗಳನ್ನು ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದು ಕರ್ನಾಟಕದ ಸಂಸ್ಕೃತಿಗೆ ಶೋಭೆ ತರುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಬಯಲಿಗೆಳಲು ಹಿಂದೆ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದರು. ಆದರೆ ಇಂದು ಸ್ಟಿಂಗ್ ಆಪರೇಷನ್ ಸ್ವರೂಪವೇ ಬದಲಾಗಿದೆ. ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಅದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ವೈಯಕ್ತಿಕ ವಿಚಾರ ಏನೇ ಇದ್ದರೂ ಅದರ ಬಗ್ಗೆ ಮಾತನಾಡಲ್ಲ. ಅದು ಅವರವರ ಆತ್ಮವಿಮರ್ಶೆಗೆ ಬಿಟ್ಟಿದ್ದು. ಆದರೆ ಅಧಿಕಾರಕ್ಕಾಗಿಯೇ ಅದನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಇದು ಮಹಿಳಾ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು.

ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್‌ಗಳು ಹಾಗೂ ಎಐ(ಕೃತಕ ಬುದ್ಧಿಮತ್ತೆ) ಬಳಸಿ ಸೃಷ್ಟಿಸಲಾಗುವ ವಿಚಾರಗಳು ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿಯಾಗಿದೆ. ಪ್ರಕರಣದಲ್ಲಿ ಕೆಲವರು ತಪ್ಪೊಪ್ಪಿಕೊಂಡಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಈ ರೀತಿಯ ರಾಜಕಾರಣ ಎಂದೂ ಇರಲಿಲ್ಲ. ಬೇರೆ ರಾಜ್ಯಗಳಲ್ಲಿ ಈ ರೀತಿ ದುರ್ಬಳಕೆ ಆಗುತ್ತಿತ್ತು. ಆದರೆ ಇದೀಗ ನಮ್ಮ ರಾಜ್ಯದಲ್ಲೇ ಇದು ನಡೆಯುತ್ತಿರುವುದು ಬೇಸರ ತರಿಸಿದೆ. ಪಕ್ಷಾತೀತವಾಗಿ, ಸಾರ್ವಜನಿಕರು ಕೂಡ ಇದು ಏಕೆ ಈ ಮಟ್ಟಕ್ಕೆ ಹೋಗುತ್ತಿದೆ ಎಂದು ಯೋಚಿಸುತ್ತಿದ್ದಾರೆ. ಯಾರೂ ಸಹ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕೂ ಸ್ಥಾನಗಳನ್ನು ಗೆದ್ದಿದೆ. ಒಂದು ಸ್ಥಾನದಲ್ಲಿ ಜೆಡಿಎಸ್‌ನ ರಂಗನಾಥ್, ಉಳಿದ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿಕ್ಷಕರು ಮತ್ತು ಪದವೀಧರರು ತಮ್ಮ ತೀರ್ಪಿನ ಮೂಲಕ ರಾಜಕೀಯಕ್ಕೆ ಉತ್ತರ ನೀಡಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ಮಾಜಿ ಅಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ನರಸಿಂಹ ಗಂಧದಮನೆ, ದೀಪಕ್ ಸಿಂಗ್, ತಿಪ್ಪೇಸ್ವಾಮಿ, ಡಿ.ಕಾಂತರಾಜ್, ಎಚ್.ಎಂ.ಸಂಗಯ್ಯ, ನಿಖಿಲ್, ತ್ಯಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಸ್ಟಿಂಗ್ ಸುಳ್ಳಾದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ

ಸ್ಟಿಂಗ್ ಆಪರೇಷನ್ ಸುಳ್ಳು ಎಂದು ಸರ್ಕಾರವೇ ಹೇಳುತ್ತಿದೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲು ಹಾಕಿದರು. ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ನಾನು ಶಾಸಕನಾಗಿದ್ದೆ. ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಂಡಿದ್ದಾರೆ. ಅಂತಹ ನಾಯಕನ ವಿರುದ್ಧ ಸ್ಟಿಂಗ್ ಆಪರೇಷನ್ ಅಸ್ತ್ರ ಬಳಸಿರುವುದು ಆಘಾತಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕುರಿತು ಇನ್ನೂ ಸಭೆ ನಡೆದಿಲ್ಲ. ಹೈಕಮಾಂಡ್ ಹಾಗೂ ಹಿರಿಯ ನಾಯಕರು ತೆಗೆದುಕೊಳ್ಳುವರು. ಅಂತಿಮವಾಗಿ ಯಾರಿಗೆ ಮತ ನೀಡಬೇಕು ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ.
ಶಾರದಾ ಪೂರ್ಯನಾಯ್ಕ, ಗ್ರಾಮಾಂತರ ಶಾಸಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net