ಇರುಮಡಿ ಕಟ್ಟಿ ಹರಕೆ ತೀರಿಸಿದ ಶಿವರಾಜಕುಮಾರ್ I shivarajkumar

ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಮಕರ ಸಂಕ್ರಾಂತಿ ಉತ್ಸವದಲ್ಲಿ ಶಿವರಾಜ್‌ಕುಮಾರ್ ಮತ್ತು ಗೀತಾ ದಂಪತಿ ಶ್ರೀ ವಿಶ್ವಸಂತೋಷ ಭಾರತಿ ಹಾಗೂ ವಿನಯ್ ಗುರೂಜಿ ಅವರಿಂದ ಪ್ರಸಾದ ಸ್ವೀಕರಿಸಿದರು.
ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಮಕರ ಸಂಕ್ರಾಂತಿ ಉತ್ಸವದಲ್ಲಿ ಶಿವರಾಜ್‌ಕುಮಾರ್ ಮತ್ತು ಗೀತಾ ದಂಪತಿ ಶ್ರೀ ವಿಶ್ವಸಂತೋಷ ಭಾರತಿ ಹಾಗೂ ವಿನಯ್ ಗುರೂಜಿ ಅವರಿಂದ ಪ್ರಸಾದ ಸ್ವೀಕರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಜ್ಜವಳ್ಳಿಯಲ್ಲಿ ಅದ್ದೂರಿ ಸಂಕ್ರಾಂತಿ ಉತ್ಸವ
  • ದೇಗುಲದ ಮೇಲ್ಭಾಗ ಗರುಡ ಪ್ರದಕ್ಷಿಣೆ
  • ಭಕ್ತ ಸಮೂಹದಿಂದ ಸ್ವಾಮಿ ಶರಣಂ ಪಠಣ
ಶಿವಮೊಗ್ಗ: ಬೆಜ್ಜವಳ್ಳಿಯ ಶ್ರೀ ಅಯ್ಯಪ್ಪ (ayyappa) ಸ್ವಾಮಿ ಸನ್ನಿಧಿಯಲ್ಲಿ ಬುಧವಾರ ಮಕರ ಸಂಕ್ರಾಂತಿ (sankranti) ಉತ್ಸವ ಅದ್ದೂರಿಯಾಗಿ ನಡೆಯಿತು. ನಟ ಶಿವರಾಜ ಕುಮಾರ್ (shivarajkumar) ಸಪತ್ನೀಕರಾಗಿ ಉತ್ಸವದಲ್ಲಿ ಪಾಲ್ಗೊಂಡರು. ಜತೆಗೆ ಸ್ವತಃ ಇರುಮಡಿ ಕಟ್ಟಿ ಅಯ್ಯಪ್ಪ ಸ್ವಾಮಿಗೆ ಹರಕೆ ತೀರಿಸಿದರು.
ಬೆಳಗ್ಗೆ 11.45ರ ಸುಮಾರಿಗೆ ಅಯ್ಯಪ್ಪ ಸ್ವಾಮಿ ಆಭರಣ ಹಾಗೂ ಗಣ ಪರಿವಾರ ದೈವಗಳ ಸಮೇತ ಪಟ್ಟದ ಆಯುಧಗಳ ಉತ್ಸವ ಗುರುಮನೆಯಿಂದ ಹೊರತರುತ್ತಿದ್ದಂತೆ ಆಗಸದಲ್ಲಿ ಗರುಡ ಪಕ್ಷಿಗಳ ದರ್ಶನವಾಯಿತು. ಈ ವೇಳೆ ಅಯ್ಯಪ್ಪ ಸ್ವಾಮಿ ಭಕ್ತರಿಂದ ದೇವರ ಸ್ಮರಣೆ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಆಭರಣವನ್ನು ದೇವರ ಸನ್ನಿಧಾನಕ್ಕೆ ತರಲಾಯಿತು.
ಮುಂಜಾನೆ ಗಣಪತಿ ಪೂಜೆಯೊಂದಿಗೆ ಹೋಮ, ಹವನ, ಕಲಶ ಸ್ಥಾಪನೆಯೊಂದಿಗೆ ಮಕರ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿ ಪೀಠಾರೋಹಣದ ವರ್ಧಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಕದಲಿ ಮಂಟಪದಲ್ಲಿ ರಾಜಪಲ್ಲಕ್ಕಿ ಮಹಾಪೂಜೆ, ಹರಕೆ ತುಲಾಭಾರ ಸೇವೆ, ಬ್ರಹ್ಮಕಲಶ ಸ್ಥಾಪನೆ, ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಗೆ ಮಹಾಮಂಗಳಾರತಿ, ಅಯ್ಯಪ್ಪಸ್ವಾಮಿ ಉಯ್ಸಲೆ ಸೇವೆ, ಕನಕಾಭಿಷೇಕ, ಮಹಾಕಲಶ ಕುಂಭಾಭಿಷೇಕ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ಆಚರಣೆಗಳು ನೆರವೇರಿದವು.
ಆಭರಣಗಳ ಪೆಟ್ಟಿಗೆ ಮುಟ್ಟಿ ನಮಸ್ಕರಿಸಿದ ಅಯ್ಯಪ್ಪ ಸ್ವಾಮಿ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಡೊಳ್ಳು, ಹುಲಿ ಕುಣಿತ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಭರಣ ಉತ್ಸವ ನಡೆಯಿತು. ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಗರುಡ ಪ್ರದಕ್ಷಿಣೆ

ಮಧ್ಯಾಹ್ನ 12ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲ್ಭಾಗದ ಆಗಸದಲ್ಲಿ ಗರುಡ ಪ್ರದಕ್ಷಿಣೆ ಹಾಕುವ ಮೂಲಕ ದರ್ಶನ ನೀಡಿತು. ಭಕ್ತರು ಭಗವಂತಸ್ವರೂಪಿ ಗರುಡ ಪಕ್ಷಿಯನ್ನು ಶ್ರೀ ಅಯ್ಯಪ್ಪ ಸ್ವಾಮಿ ನಾಮಸ್ಮರಣೆಯೊಂದಿಗೆ ದರ್ಶನ ಮಾಡಿದರು. ಮಕರ ಸಂಕ್ರಮಣ ದಿನದಂದು ಪ್ರತಿವರ್ಷ ಬೆಜ್ಜವಳ್ಳಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಗರುಡ ದರ್ಶನ ನೀಡುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ಬಾರಿಯೂ ಶ್ರೀ ಆಭರಣ ಗುರುಮನೆಯಿಂದ ಹೊರತಂದು ದೇವಸ್ಥಾನದೊಳಕ್ಕೆ ಕೊಂಡೊಯ್ಯುವ ಒಂದು ಗಂಟೆಯ ಅವಧಿಯಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ದೇಗುಲದ ಸಮೀಪ ಎತ್ತರದಲ್ಲಿ ಗರುಡ ಕಾಣಿಸುತ್ತಿದ್ದಂತೆ ಭಕ್ತರ ಉದ್ಘೋಷ ಮೇರೆ ಮೀರಿತು.

ಶಿವರಾಜ್‌ಕುಮಾರ್‌ಗೆ ಗೌರವ

ಈ ಬಾರಿ ಬೆಜ್ಜವಳ್ಳಿಯಲ್ಲಿ ಇರುಮುಡಿ ಕಟ್ಟಿದ ಶಿವರಾಜ್‌ಕುಮಾರ್ ಪತ್ನಿ ಗೀತಾ ಜತೆ ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿವಣ್ಣ ಮಾಲೆ ವಿಸರ್ಜಿಸಿದರು. ಮಧ್ಯಾಹ್ನ ಜರುಗಿದ ಧಾರ್ಮಿಕ ಸಭೆಯಲ್ಲಿ ಶಿವರಾಜ್‌ಕುಮಾರ್, ಜನಪದ ಗಾಯಕ ಕೆ.ಯುವರಾಜ್, ಹುಬ್ಬಳ್ಳಿಯ ಅಯ್ಯಪ್ಪ ಗುರುಸ್ವಾಮಿ ಶಿವಾನಂದ ಬಾರ್ಕಿ ಅವರಿಗೆ ಹರಿಹರಾತ್ಮಜ ಪೀಠ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಗೀತಾ ಶಿವರಾಜ್‌ಕುಮಾರ್, ಜಿಪಂ ಮಾಜಿ ಸದಸ್ಯ ಅಶೋಕಮೂರ್ತಿ, ಕಾಂಗ್ರೆಸ್ ಮುಖಂಡ ರಮೇಶ್ ಶಂಕರಘಟ್ಟ ಮುಂತಾದವರಿದ್ದರು.
"

ಯಾವಾಗಲೂ ನಾನು ಶಬರಿಮಲೈಗೆ ತೆರಳಿ ಹರಕೆ ತೀರಿಸುತ್ತಿದ್ದೆ. ಕಾರಣಾಂತರದಿಂದ ಈ ಬಾರಿ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಇರುಮುಡಿ ಕಟ್ಟಿ ಸೇವೆ ಸಲ್ಲಿಸಿದ್ದು ಮನಸ್ಸಿಗೆ ಸಮಾಧಾನ ತಂದಿದೆ. ಈ ಕ್ಷೇತ್ರದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ. ಇಂದು ಸಾಕ್ಷಾತ್ ದರ್ಶನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net