ಶಿವಮೊಗ್ಗ ಮಾರಿಕಾಂಬೆ ಉತ್ಸವಕ್ಕೆ ಅದ್ದೂರಿ ಚಾಲನೆ I maikamba jatre

ಶಿವಮೊಗ್ಗ ಗಾಂಧಿ ಬಜಾರ್‌ನಲ್ಲಿ ಮೊದಲ ದಿನ ಪ್ರತಿಷ್ಠಾಪಿಸಿದ್ದ ಮಾರಿಕಾಂಬೆ.
ಶಿವಮೊಗ್ಗ ಗಾಂಧಿ ಬಜಾರ್‌ನಲ್ಲಿ ಮೊದಲ ದಿನ ಪ್ರತಿಷ್ಠಾಪಿಸಿದ್ದ ಮಾರಿಕಾಂಬೆ.
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ ಹರಿದುಬಂದ ಭಕ್ತಸಾಗರ
  • ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ
  • ಉಡಿ ತುಂಬಿ ಹರಕೆ ಸಲ್ಲಿಸಿದ ಮಹಿಳೆಯರು
  • ವಿವಿಧ ಸಮಾಜಗಳಿಂದ ಪೂಜೆ ಸಲ್ಲಿಕೆ
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬ (marikamba) ದೇವಿಯ ಐದು ದಿನಗಳ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ (tuesday) ವಿಧ್ಯುಕ್ತ ಚಾಲನೆ ದೊರೆತಿದೆ. ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು (publics) ದೇವಿಯ ದರ್ಶನ ಪಡೆದರು.
ಮಂಗಳವಾರ ಬೆಳಗ್ಗೆ ಬಿಬಿ ರಸ್ತೆಯ ನಾಡಿಗರ ಮನೆಯವರು ಪೂಜೆ ಸಲ್ಲಿಸಿದ ಬಳಿಕ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಮಾರಿಕಾಂಬ ದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ದೇವಿಯ ದರ್ಶನಕ್ಕೆ ಬೆಳಗಿನಿಂದಲೇ ಭಕ್ತಸಾಗರವೇ ಹರಿದು ಬಂದಿತ್ತು. ಬೆಂಲಗಿನ ಜಾವ 4 ಗಂಟೆಯಿಂದ ಸರತಿ ಸಾಲಿನಲ್ಲಿ ಜನ ನಿಂತಿದ್ದರು.
ಈ ಹಿಂದಿನ ಜಾತ್ರೆಗಳಿಗಿಂತಲೂ ಈ ಬಾರಿ ಸರದಿ ಸಾಲು ದೊಡ್ಡದಿತ್ತು. ವಿಶೇಷ ದರ್ಶನಕ್ಕೆ ಈ ಬಾರಿ ಕೌಂಟರ್ ತೆರೆಯಲಾಗಿತ್ತು. ಟಿಕೆಟ್ ಪಡೆಯಲು ಎಎ ವೃತ್ತದ ಕಡೆಯಿಂದ ಸರದಿಯ ವ್ಯವಸ್ಥೆ ಮಾಡಲಾಗಿತ್ತು. ಈ ಸಾಲು ಕೂಡಾ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು. ಕೆಲವರಿಗೆ ನಾಲ್ಕೈದು ತಾಸು ಬಳಿಕ ದೇವಿಯ ದರ್ಶನ ಸಿಕ್ಕಿತ್ತು. ದೇವಿಗೆ ಉಡಿ ತುಂಬಲು ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಸರದಿಯಲ್ಲಿ ನಿಂತಿದ್ದರು.
ದೇವಿಗೆ ಸೀರೆ, ಅರಿಶಿಣ-ಕುಂಕುಮ, ಬಳೆ, ಕಣ ಅರ್ಪಿಸಿ ಹರಕೆ ತೀರಿಸಿದರು. ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಾರು ಒಂದೂವರೆ ಕಿ.ಮೀವರೆಗೂ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಚಿಕ್ಕ ಮಕ್ಕಳನ್ನು ಮಾರಿಕಾಂಬೆ ಮಡಿಲಿನಲ್ಲಿ ಕೂರಿಸಿ ಆಶೀರ್ವಾದ ಪಡೆಯಲಾಯಿತು.
ಬಿಸಿಲು ಹೆಚ್ಚಾದ ನಂತರ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುವುದು ಕಷ್ಟ ಎಂದುಕೊಂಡು ಮುಂಜಾನೆಯೇ ದರ್ಶನಕ್ಕೆ ಬಂದವರ ಸಂಖ್ಯೆ ಹೆಚ್ಚಿತ್ತು. ಒಂದು ಹಂತದಲ್ಲಿ ಬಿ.ಎಚ್ ರಸ್ತೆಯ ಚರ್ಚ್‌ವರೆಗೂ ಭಕ್ತರ ಸರದಿ ಸಾಲು ಬೆಳೆದಿತ್ತು. ಸಂಜೆ ನಂತರ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು.
ದೇವಾಲಯ ಸಮಿತಿ ಪ್ರಮುಖರು, ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ನಿರ್ಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪೊಲೀಸರು ಸ್ವಯಂ ಸೇವಕರು, ದೇವಸ್ಥಾನ ಸಮಿತಿಯವರು ಆಗಾಗ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡುತ್ತಿದ್ದರು. ಗಾಂಧಿ ಬಜಾರ್ ಹಾಗೂ ಮಾರಿಕಾಂಬ ದೇವಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಮಂಗಳವಾರ ರಾತ್ರಿ 10ರ ಸುಮಾರಿಗೆ ಉಪ್ಪಾರ ಸಮಾಜದವರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಮಾರಿ ಗದ್ದುಗೆವರೆಗೂ ಕರೆತಂದರು. ಈ ವೇಳೆ ಮಂಗಳ ವಾದ್ಯಗಳೊಂದಿಗೆ ದೇವಿಯನ್ನು ಎದುರುಗೊಂಡ ಗಂಗಾಮತಸ್ಥ ಸಮಾಜದವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಘ ಸಂಸ್ಥೆಗಳಿಂದ ಸೇವೆ

ದೇವಿಯ ದರ್ಶನಕ್ಕೆ ತಾಸುಗಟ್ಟಲೇ ಸರದಿಯಲ್ಲಿ ನಿಂತ ಭಕ್ತರಿಗೆ ಆಯಾಸವಾಗದಂತೆ ಹಲವೆಡೆಗಳಲ್ಲಿ ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಹಲವು ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಮಜ್ಜಿಗೆ ಹಾಗೂ ಪಾನಕ ವಿತರಣೆಯಲ್ಲಿ ತೊಡಗಿದ್ದರು. ಪೊಲೀಸ್ ಸಿಬ್ಬಂದಿ ವಾಹನ ಹಾಗೂ ಜನರ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ಯಾವುದೇ ಗೊಂದಲ ಆಗದಂತೆ ಕ್ರಮ ವಹಿಸಿದರು. ಶಾಮಿಯಾನ ಹಾಗೂ ಜರ್ಮನ್ ಟೆಂಟ್ ಅಳವಡಿಸಿದ್ದರಿಂದ ಸರದಿಯಲ್ಲಿ ನಿಲ್ಲುವವರಿಗೆ ತುಸು ಅನುಕೂಲವಾಯಿತು. ಗಾಂಧಿ ಬಜಾರ್‌ನಲ್ಲಿ ಅಲ್ಲಲ್ಲಿ ಪಾಲಕ ವಿತರಣೆ ಇದ್ದುದರಿಂದ ಭಕ್ತರಿಗೆ ಹೆಚ್ಚು ಸಮಸ್ಯೆ ಆಗಲಿಲ್ಲ. ಜಾತ್ರೆ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಗಾಂಧಿ ಬಜಾರ್ ಹಾಗೂ ಕೋಟೆ ಮಾರಿಕಾಂಬ ದೇವಾಲಯ ಸೇರುವ ಸಂಪರ್ಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.

ಮನೆಗಳಲ್ಲೂ ಹಬ್ಬ

ನಗರದ ಬಹುತೇಕ ಮನೆಗಳಲ್ಲೂ ಮಾರಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೇವಿನ ಸೊಪ್ಪು ತಂದು ದೇವಿ ಹೆಸರಲ್ಲಿ ಕಲಶವಿಟ್ಟು ಪೂಜೆ ನೆರವೇರಿಸಲಾಗುತ್ತಿದೆ. ಮೊದಲ ದಿನ ಹೋಳಿಗೆ, ಪಾಯಸ ಮುಂತಾದ ಸಿಹಿ ಖಾದ್ಯಗಳ ತಯಾರಿಯೂ ನಡೆಯಿತು. ಬೇರೆ ಊರುಗಳಿಂದ ಸಂಬಂಧಿಕರನ್ನು ಆಹ್ವಾನಿಸಿ ಅವರಿಗೆ ಹಬ್ಬದ ಊಟ ಉಣಬಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net