

ಶಿವಮೊಗ್ಗ: ಕಳೆದ ಫೆಬ್ರವರಿಯಲ್ಲಿ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಕಾಫಿ ತೋಟವೊಂದರಲ್ಲಿ ಮಹಿಳೆ ಸೇರಿ ಕಾರ್ಮಿಕರಿಬ್ಬರ ಬಲಿ ಪಡೆದಿದ್ದ 32 ವರ್ಷದ ಶೌರ್ಯ ಆನೆ ಸಕ್ರೆಬೈಲ್ ಬಿಡಾರದಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟಿದೆ.
ದೀರ್ಘಕಾಲೀನ ಅನಾರೋಗ್ಯ ಮತ್ತು ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದ ಆನೆ ಬುಧವಾರ ರಾತ್ರಿ ಕುಸಿದು ಬಿದ್ದಿತ್ತು. ವೈದ್ಯರಿಬ್ಬರು ನಿರಂತರ ತಪಾಸಣೆ ಮತ್ತು ನಿಗಾ ವಹಿಸಿದ್ದರು. ಬಳಿಕ ಗ್ಲೂಕೋಸ್ ಹಾಗೂ ಅಗತ್ಯ ದ್ರವ ನೀಡಿ ಆನೆಯನ್ನು ಮೇಲೆಬ್ಬಿಸಲು ಸಿಬ್ಬಂದಿ ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿಲ್ಲ.
2026ರ ಫೆ.22ರಂದು ಬಾಳೆಹೊನ್ನೂರಿನಲ್ಲಿ ಆನೆ ಸೆರೆಹಿಡಿದು ಸಕ್ರೆಬೈಲ್‌ನ ಬಿಡಾರಕ್ಕೆ ತಂದು ಕ್ರಾಲ್‌ಗೆ ಹಾಕಲಾಕಿತ್ತು. ಈ ವೇಳೆ ಸಿಟ್ಟಿಗೆದ್ದು ಕ್ರಾಲ್‌ನ ಪೋಲ್‌ಗಳನ್ನು ಮುರಿದು ಹೊರಬರಲು ಪ್ರಯತ್ನಿಸುತ್ತಿತ್ತು. ಮೈ ಮತ್ತು ಕಾಲುಗಳಿಗೆ ಪೆಟ್ಟು ಮಾಡಿಕೊಂಡಿತ್ತು. ಶಿವಮೊಗ್ಗ ಪಶುವೈದ್ಯಕೀಯ ಮಹಾ ವಿದ್ಯಾಲಯದ ಡಾ. ಬಿ.ಜಿ.ರವೀಂದ್ರ ಅವರು ಆರೋಗ್ಯ ತಪಾಸಣೆ ಮಾಡುತ್ತಿದ್ದರು.
ಜೂ.16ರಂದು ವನ್ಯಜೀವಿ ಎಸ್‌ಒಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಿ ಡಿಜಿಟಲ್ ಎಕ್ಸ್-ರೇ, ಥರ್ಮಲ್ ಇಮೇಜಿಂಗ್ ಪರೀಕ್ಷೆ ನಡೆಸಿದಾಗ ಆನೆಯ ಹಿಂದಿನ ಕಾಲಿನಲ್ಲಿ ಒಳಗಾಯ ಪತ್ತೆಯಾಗಿತ್ತು. ಆ ಗಾಯಗಳಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಸೆ.21ರಂದು ಡಾ. ಮುಜೀಬ್ ಮತ್ತು ಡಾ. ಕಿರಣ್ ಅವರ ಶಿಫಾರಸಿನ ಮೇರೆಗೆ ಕಾಲಿಗೆ ಆಗಿರುವ ಗಾಯಗಳ ಪರೀಕ್ಷೆ ನಡೆಸಿ ಆನೆಗೆ ಪ್ರಸ್ತುತ ನೀಡುತ್ತಿರುವ ಚಿಕಿತ್ಸೆಯನ್ನೇ ಮುಂದುವರಿಸಲಾಗಿತ್ತು.
ತಜ್ಞ ವೈದ್ಯರ ಸಲಹೆಯಂತೆ ಎಲ್ಲ ಸುಧಾರಿತ ಚಿಕಿತ್ಸೆಗಳನ್ನು ಮುಂದುವರಿಸಿದ ಸಂದರ್ಭ ಆನೆಯ ಹಿಂದಿನ ಎಡ ತೊಡೆಯ ಒಳಭಾಗದಲ್ಲಿ ಕೀವು ತುಂಬಿರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಅದು ಡೀಪ್ ನೆಕ್ರೋಸಿಸ್ ಆಗಿದ್ದು, ಆನೆಯ ಕಾಲಿನ ಮೇಲೆ ಒತ್ತಡ ಬೀಳದ ರೀತಿಯಲ್ಲಿ ಆನೆ ಟ್ರೀಟ್ಮೆಂಟ್ ಶೆಡ್‌ನಲ್ಲಿ ಸ್ಲಿಂಗ್ ಬಳಕೆ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಬುಧವಾರದವರೆಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಆನೆ ರಾತ್ರಿ ಏಕಾಏಕಿ ಕುಸಿದು ಬಿದ್ದಿತ್ತು ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಸೊಂಕಿನ ಕಾರಣದಿಂದ ಕೊನೆಯುಸಿರೆಳೆದಿದೆ. ಆನೆಗೆ ಉಂಟಾದ ಒಳಗಾಯಗಳು, ಸೋಂಕು ಮತ್ತು ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
2026ರ ಫೆಬ್ರವರಿಯಲ್ಲಿ ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿರುವ ನಾಗೇಶ್ ಗೌಡ ಎಂಬುವರ ಕಾಫಿ ತೋಟದಲ್ಲಿ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ 7 ದಿನಗಳ ಬಳಿಕ ಅದೇ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಎಂಬುವರನ್ನೂ ಬಲಿಪಡೆದಿತ್ತು. ಘಟನೆ ಬಳಿಕ 7 ಪಳಗಿದ ಆನೆಗಳ ಜತೆಗೆ 75 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನ್ನು ಬಳಿಕ ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಕರೆತಂದು ಶೌರ್ಯ ಎಂದು ಹೆಸರಿಡಲಾಗಿತ್ತು.
ಶೌರ್ಯನಿಗೆ ಮರದ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. 3 ತಿಂಗಳ ಅವಧಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಶೌರ್ಯನನ್ನು ಪಳಗಿಸಿದ್ದರು. 2026ರ ಮೇ ತಿಂಗಳಲ್ಲಿ ತರಬೇತಿ ಪೂರ್ಣಗೊಂಡ ನಂತರ ಶೌರ್ಯನನ್ನು ಮರದ ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಈ ಕಾರ್ಯದಲ್ಲಿ ಸಕ್ರೆಬೈಲು ಬಿಡಾರದ ಆನೆ ಬಾಲಣ್ಣನನ್ನು ಬಳಸಲಾಗಿತ್ತು.