ಶಾಮನೂರು ಜನಾನುರಾಗಿ ನಡೆ ಮಾದರಿ| shamanuru shivashankarappa

ಶ್ರದ್ಧಾಂಜಲಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರುದ್ರಮುನಿ ಎನ್. ಸಜ್ಜನ್, ಮಹಾಲಿಂಗಯ್ಯ ಶಾಸ್ತ್ರಿ, ಅನಿತಾ ರವಿಶಂಕರ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರುದ್ರಮುನಿ ಎನ್. ಸಜ್ಜನ್, ಮಹಾಲಿಂಗಯ್ಯ ಶಾಸ್ತ್ರಿ, ಅನಿತಾ ರವಿಶಂಕರ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಕ್ಕಿನಕಲ್ಮಠದ ಶ್ರೀಗಳಿಂದ ಬಣ್ಣನೆ
  • ವೀರಶೈವ ಲಿಂಗಾಯತ ಮಹಾಸಭಾದಿಂದ ಶ್ರದ್ಧಾಂಜಲಿ
  • ನಾಯಕನ ನೆನೆದ ವೀರಶೈವ ಸಮಾಜದ ಗಣ್ಯರು
ಶಿವಮೊಗ್ಗ: ಗುಮಾಸ್ತನಾಗಿ ಕೆಲಸ ಆರಂಭಿಸಿದ ಶಾಮನೂರು (shamanuru) ಶಿವಶಂಕರಪ್ಪ ಅವರು ಎಲ್ಲರ ವಿಶ್ವಾಸ ಗಳಿಸಿ ಬಾಪೂಜಿ (bapuji) ಸಂಸ್ಥೆಯನ್ನು ಕಟ್ಟಿ ದೇಶದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಯಾಗಿ ಬೆಳೆಸಿದರು. ದಾವಣಗೆರೆ (davanagere) ಗೆ ವಿದ್ಯಾಕಾಶಿ ಎಂಬ ಅನ್ವರ್ಥನಾಮ ಸಿಗುವಂತೆ ನೋಡಿಕೊಂಡರು ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಾಮನೂರು ನಿಧನದ ಹಿನ್ನೆಲೆಯಲ್ಲಿ ಅಖಲಿ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಸೋಮವಾರ ಬೆಕ್ಕಿನ ಕಲ್ಮಠದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಶ್ರೀಮಂತರು ಎಂಬ ಕಾರಣಕ್ಕೆ ಶಿವಶಂಕರಪ್ಪ ಅವರನ್ನು ಜನರು ಪ್ರೀತಿಸಲಿಲ್ಲ. ಬದಲಿಗೆ ಅವರ ಬದುಕು, ಜನಾನುರಾಗಿ ನಡೆಕಂಡು ಅವರನ್ನು ಗೌರವಿಸಿದ್ದರು ಎಂದು ಅಭಿಪ್ರಾಯಪಟ್ಟರು.
ನಮ್ಮ ಶ್ರೀಮಠದಿಂದ ಅವರಿಗೆ ಗುರುಬಸವಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಜವಳಿ ನಗರಿ, ಕಾರ್ಮಿಕ ನಗರಿ ಎಂದು ಹೆಸರು ಪಡೆದಿದ್ದ ದಾವಣಗೆರೆಯನ್ನು ವಿದ್ಯಾಕಾಶಿಯಾಗಿ ರೂಪಿಸಿ ಜನಮಾನಸದಲ್ಲಿ ನೆಲೆ ನಿಂತವರು ಶಾಮನೂರು ಎಂದು ಬಣ್ಣಿಸಿದರು.
ನಿಷ್ಠುರವಾದಿ, ನೇರ ನುಡಿ, ಕೊಡುಗೈ ದಾನಿ ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಅವರ ಆದರ್ಶಗಳು ಮತ್ತು ಅವರ ಕೆಲಸಗಳನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಸಮಾಜದ ವಿಚಾರದಲ್ಲಿ ಅವರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ. ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಿದವರು. ಪಂಚಪೀಠದ ಶ್ರೀಗಳನ್ನು ಒಂದೇ ವೇದಿಕೆಯಡಿ ತಂದು ಸಮಾವೇಶ ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಒಂದೇ ವೇದಿಕೆಯಲ್ಲಿ ಪಂಚಪೀಠಗಳ ಶ್ರೀಗಳಿಂದ ಸಮಾಜಕ್ಕೆ ಮಾರ್ಗದರ್ಶನ ದೊರೆಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ರಾಜಕೀಯದಲ್ಲಿದ್ದರೂ ರಾಜಕೀಯ ಲೇಪವನ್ನು ಮೈಗಂಟಿಸಿಕೊಳ್ಳಲಿಲ್ಲ. ಒಳ್ಳೆಯ ಕೆಲಸವನ್ನು ಯಾವುದೇ ಪಕ್ಷದವರು ಮಾಡಿದರೂ ಅದನ್ನು ಹೊಗಳಿ ಬೆನ್ನುತಟ್ಟಿದ್ದಾರೆ. ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಾರ್ಯವನ್ನು ಮೆಚ್ಚಿದ್ದೇ ಇದಕ್ಕೆ ನಿದರ್ಶನ ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಅನಿತಾ ರವಿಶಂಕರ್, ತಾರಾನಾಥ್, ಎಸ್.ಪಿ.ದಿನೇಶ್, ಮಹಾಲಿಂಗಯ್ಯ ಶಾಸ್ತ್ರಿ, ರೇಣುಕಾರಾಧ್ಯ, ವಾಗ್ದೇವಿ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.
"

ಮೂರು ಬಾರಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಗಟ್ಟಿ ಮಾತಿನ ವ್ಯಕ್ತಿ. ಸರ್ಕಾರದಿಂದ ತಪ್ಪಾದಾಗ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಿದ್ದರು. ಅಧಿಕಾರ ಶಾಶ್ವತವಲ್ಲ. ಮಂತ್ರಿ ಸ್ಥಾನ ಹೋದರೆ ಹೋಗಲಿ. ಹೆಲಿಕಾಪ್ಟರ್ ಹತ್ತಿ ದಾವಣಗೆರೆಗೆ ಹೋಗಿ ಬಿಡುತ್ತೇನೆ ಎಂದು ಮುಖ್ಯಮಂತ್ರಿಗೆ ನೇರವಾಗಿ ಹೇಳುವ ಧೈರ್ಯ ಅವರಲ್ಲಿತ್ತು.

"

ಶಾಮನೂರು ಶಿವಶಂಕರಪ್ಪ ಸಮಾಜದ ಮೇರು ಪರ್ವತ, ಅಜಾತಶತ್ರು. ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿದ ಕೆಲಸಗಳು ಅನೇಕ. ಅವರಿಗೆ ಎರಡು ಬಾರಿ ಸಿಎಂ ಸ್ಥಾನ ಸಿಗುವ ಸಂದರ್ಭ ಸೃಷ್ಟಿಯಾಗಿತ್ತು. ಆದರೆ ಅವರು ಅಧಿಕಾರಕ್ಕೆ ಅಂಟಿಕೊಳ್ಳಲಿಲ್ಲ. ಅವರ ವಿಚಾರಧಾರೆ ಸಮಾಜಕ್ಕೆ ಮತ್ತು ಯುವಶಕ್ತಿಗೆ ಪ್ರೇರಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net