

ಶಿವಮೊಗ್ಗ: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಹಿಡಿಯಲು ಬೆಂಗಳೂರು ಬ್ಯಾಡರಹಳ್ಳಿ ಠಾಣೆ ಪೊಲೀಸರು ಶಿವಮೊಗ್ಗಕ್ಕೆ ಬಂದ ವೇಳೆ ಹೈಡ್ರಾಮ ನಡೆದಿದೆ. ಪೊಲೀಸರನ್ನು ಕಂಡ ರೌಡಿಶೀಟರ್ ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮೀರ್ ಅಲಿಯಾಸ್ ಬಚ್ಚನ್ ಚಾಕು ಇರಿದುಕೊಂಡ ರೌಡಿಶೀಟರ್. ಪ್ರಕರಣವೊಂದರಲ್ಲಿ ಬಚ್ಚನ್‌ಗಾಗಿ ಪೊಲೀಸರ ತಂಡ ಶಿವಮೊಗ್ಗಕ್ಕೆ ಬಂದಿತ್ತು. ಈ ವೇಳೆ ಪೊಲೀಸರನ್ನು ಕಂಡ ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೊಟ್ಟೆಗೆ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಗಾಯಗೊಂಡಿರುವ ಬಚ್ಚನ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಯಲ್ಲಿದ್ದ ಚಾಕುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು, ಬಚ್ಚನ್‌ನನ್ನು ವಶಕ್ಕೆ ಪಡೆದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಜತೆಯಲ್ಲೇ ಕರೆದೊಯ್ದಿದ್ದಾರೆ.