ಭದ್ರಾವತಿ ಬರಪೀಡಿತ ಪ್ರದೇಶಪಟ್ಟಿ ಸೇರ್ಪಡೆಗೆ ಪರಿಶೀಲನೆ I bhadravati drought list

ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
  • ಗ್ರೌಂಡ್ ಟ್ರೂಥಿಂಗ್ ಆರಂಭ
ಶಿವಮೊಗ್ಗ: ಜಿಲ್ಲೆಯಲ್ಲಿ ಸದ್ಯಕ್ಕೆ ಭದ್ರಾವತಿ (bhadravati) ತಾಲೂಕಿನಲ್ಲಿ ಹೆಚ್ಚಿನ ಮಳೆ ಕೊರತೆ ಕಂಡು ಬಂದಿದೆ. ಹೀಗಾಗಿ ತಾಲೂಕನ್ನು ಬರಪೀಡಿತ (drought) ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಸರ್ಕಾರದ ಸೂಚನೆಯಂತೆ ಗ್ರೌಂಡ್ ಟ್ರೂಥಿಂಗ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ (dc) ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ನಿರ್ದಿಷ್ಟ ಮಾನದಂಡಗಳಿವೆ. ಅಲ್ಲಿ ವಾಡಿಕೆಗಿಂತ ಶೇ. 60ರಷ್ಟು ಮಳೆ ಕೊರತೆ ಆಗಿರಬೇಕು. ಸತತ ಮೂರು ವಾರ ಅಲ್ಲಿ ಮಳೆ ಬಿದ್ದಿರಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಗ್ರೌಂಡ್ ಟ್ರೂಥಿಂಗ್ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತದಿಂದ ಕಳುಹಿಸಲಾಗುವ ವರದಿ ಆಧರಿಸಿ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಬರ ಮಾಹಿತಿ ಒದಗಿಸಲಾಗುತ್ತದೆ. ಆ ವೇಳೆ ಗ್ರೌಂಡ್ ಟ್ರೂಥಿಂಗ್ ವರದಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಈಗಲೇ ಭದ್ರಾವತಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಲಿದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಭಾರತ್ ಜೋಡೋ 28 ಸಾವಿರ ನೋಂದಣಿ

ಭಾರತ್ ಜೋಡೋ ಯುವ ಸಂಘವು ರಾಜ್ಯ ಸರ್ಕಾರವು ಆರಂಭಿಸಿರುವ ವಿಶೇಷ ಯೋಜನೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 35,600 ಸದಸ್ಯರನ್ನು ಒಳಗೊಂಡ 356 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಈವರೆಗೆ 28,137 ಮಂದಿ ಸದಸ್ಯರಾಗಿದ್ದು, ರಾಜ್ಯದಲ್ಲಿ ಸಂಘಗಳ ರಚನೆಯಲ್ಲಿ ಶಿವಮೊಗ್ಗ ಜಿಲ್ಲೆ 6ನೇ ಸ್ಥಾನದಲ್ಲಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಪ್ರತಿ ಸಂಘದಲ್ಲೂ ಕನಿಷ್ಟ 100 ಸದಸ್ಯರು ಇರಬೇಕು. ಮಹಿಳೆಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ನೀಡುವುದು ಕಡ್ಡಾಯ. ಇದಕ್ಕೆ ಸರ್ಕಾರಿ ಅಧಿಕಾರಿಯೊಬ್ಬರನ್ನು ಮಾರ್ಗದರ್ಶಕರನ್ನಾಗಿ ನೇಮಕ ಮಾಡಲಾಗುತ್ತದೆ. ಸೂಕ್ತ ತರಬೇತಿ ನೀಡುವ ಜತೆಗೆ ಆರ್ಥಿಕ ವಹಿವಾಟಿನ ಮೇಲೆ ನಿಗಾ ಇರಿಸಲಾಗುತ್ತದೆ ಎಂದರು.

ಮುಂದಿನ ತಿಂಗಳು ಪ್ರಜಾಸೇವೆ

ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟೆಂಬರ್‌ನಿಂದ ಪ್ರಜಾಸೇವಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಎರಡು ಮತ್ತು ನಾಲ್ಕನೇ ಶನಿವಾರಗಳಂದು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಗರ, ಪಟ್ಟಣ, ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗುವುದು ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net