ಶಿವಮೊಗ್ಗ: ವಿಮಾನ ಸೇವೆ ಮುಂದುವರಿಸಲು ಸಾಧ್ಯವಾಗದಿದ್ದರೆ ವಿಮಾನ ನಿಲ್ದಾಣ ಮುಚ್ಚಿ, ಅದಕ್ಕಾಗಿ ಭೂಮಿ ನೀಡಿದ ರೈತರಿಗೆ ಅವರ ಜಮೀನು ವಾಪಸ್ ನೀಡಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಜನರಿಗೆ ವಿಮಾನ ಸೇವೆಯೂ ಬೇಡ, ವಿಮಾನ ನಿಲ್ದಾಣವೂ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ರೈತರು ಭೂಮಿಯನ್ನು ನೀಡಿದ್ದಾರೆ. ಆದರೆ ಇದೀಗ ವಿಮಾನ ಹಾರಾಟವೇ ಸ್ಥಗಿತಗೊಂಡಿರುವುದು ಸರಿಯಲ್ಲ. ಸೇವೆ ಮುಂದುವರಿಸಲು ಸಾಧ್ಯವಾಗದಿದ್ದರೆ ರೈತರಿಗೆ ಭೂಮಿ ಹಿಂದಿರುಗಿಸಿ ಎಂದು ಆಗ್ರಹಿಸಿದರು.
ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಿಕೊಡುವ ಉದ್ದೇಶದಿಂದಲೇ ಸೇವೆ ಸ್ಥಗಿತಗೊಳಿಸಲಾಗಿದೆಯೇ ಎಂಬ ಅನುಮಾನವೂ ಇದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಉಡಾನ್ ಯೋಜನೆಯಡಿ ಶಿವಮೊಗ್ಗಕ್ಕೆ ವಿಮಾನ ಹಾರಾಟ ಮರು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿರುವುದು ಅವರಿಗೂ ಮುಜುಗರ ಉಂಟುಮಾಡುವ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಿ ವಿಮಾನ ಸೇವೆ ಮುಂದುವರಿಸಬೇಕು ಎಂದರು.