ಸಂಯುಕ್ತ ಕಿಸಾನ್ ಮೋರ್ಚಾದಿಂದ ಆ.10ಕ್ಕೆ ಪ್ರತಿಭಟನೆ | Jail Bharo Movement
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿ ಜೈಲ್ ಭರೋ ಚಳವಳಿ
ಜಂಟಿ ಕ್ರಿಯಾ ಸಮಿತಿ ಕರೆ ಮೇರೆಗೆ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿಕೆ
ಶಿವಮೊಗ್ಗ: ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯಡಿ ದೇಶಾದ್ಯಂತ ಜೈಲ್ ಭರೋ ಚಳವಳಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ(United Kisan Morcha)
ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ಮೇರೆಗೆ ಆ.10ರಂದು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ(H.R.Basavarajappa) ಹೇಳಿದರು.
ದೇಶದ ಕೃಷಿ, ಕಾರ್ಮಿಕ ಹಾಗೂ ಸಾರ್ವಜನಿಕ ವಲಯವನ್ನು ದುರ್ಬಲಗೊಳಿಸುವ ನೀತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿವೆ. ರೈತರ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡು ಕಾರ್ಪೊರೇಟ್ ಕಂಪನಿ(corporate company)ಗಳಿಗೆ ಅನುಕೂಲ ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯುತ್ ಖಾಸಗೀಕರಣ(Electricity privatization), ಕಾರ್ಪೊರೇಟ್ ಪರವಾದ ಹೊಸ ಬೀಜ ಕಾಯ್ದೆ ಹಾಗೂ ಕೃಷಿ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಹೆಚ್ಚಿಸುವ ನೀತಿಗಳು ರೈತರ ಭವಿಷ್ಯಕ್ಕೆ ಅಪಾಯಕಾರಿ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನುಬದ್ಧ ಖಾತ್ರಿ ನೀಡುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ಟೀಕಿಸಿದರು.
ಇದೇ ವರ್ಷ ರಸಗೊಬ್ಬರದ ಬೆಲೆಯನ್ನು ಹಲವು ಬಾರಿ ಹೆಚ್ಚಿಸಿರುವುದರಿಂದ ಕೃಷಿ ಉತ್ಪಾದನಾ ವೆಚ್ಚ(Agricultural production cost) ಗಣನೀಯವಾಗಿ ಏರಿಕೆಯಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ರೈತರು ಮಾತ್ರವಲ್ಲ. ಮಧ್ಯಮ ಹಾಗೂ ಬಡ ವರ್ಗದ ಜನರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಅತಿವೃಷ್ಟಿ ಹಾಗೂ ಅನಾವೃಷ್ಟಿ(Heavy rain and drought)ಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಹಳೆಯ ಮಾನದಂಡಗಳ ಪ್ರಕಾರ ಪರಿಹಾರ ನೀಡುತ್ತಿರುವುದು ಅವೈಜ್ಞಾನಿಕ. ಪರಿಹಾರದ ಮಾನದಂಡಗಳನ್ನು ಕನಿಷ್ಠ ಶೇ.10ರಷ್ಟು ಹೆಚ್ಚಿಸಬೇಕು. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಕೃಷಿ ಉತ್ಪನ್ನಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹನುಮಮ್ಮ, ಸಿಐಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ್, ಕರ್ನಾಟಕ ಜನಶಕ್ತಿಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಮಹಿಳಾ ಸಂಚಾಲಕಿ ಭಾಗ್ಯಾ ರಾಘವೇಂದ್ರ, ಡಿಎಸ್‌ಎಸ್ (ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಶೇಷಪ್ಪ ಸುದ್ದಿಗೋಷ್ಠಿಯಲ್ಲಿದ್ದರು.