ಕೋಚಿಂಗ್ ಡಿಪೋ ಕಾಮಗಾರಿ ಮರು ಟೆಂಡರ್‌ಗೆ ಚಿಂತನೆ Coaching Depo

ನಗರ ಹೊರವಲಯದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ನಿಧಾನ ಗತಿಯಲ್ಲಿದ್ದು, ಈವರೆಗೆ ಶೇ.30ರಷ್ಟು ಮಾತ್ರ ಕೆಲಸವಾಗಿದೆ. ಕಾಮಗಾರಿ ತ್ವರಿತಗೊಳಿಸಲು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆಯುವ ಕುರಿತು ಕ್ರಮ ಕೈಗೊಳ್ಳುವಂತೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
Coaching Depo
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on: 

ಶಿವಮೊಗ್ಗ: ನಗರ ಹೊರವಲಯದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ನಿಧಾನ ಗತಿಯಲ್ಲಿದ್ದು, ಈವರೆಗೆ ಶೇ.30ರಷ್ಟು ಮಾತ್ರ ಕೆಲಸವಾಗಿದೆ. ಕಾಮಗಾರಿ ತ್ವರಿತಗೊಳಿಸಲು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆಯುವ ಕುರಿತು ಕ್ರಮ ಕೈಗೊಳ್ಳುವಂತೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ವಿ.ಸೋಮಣ್ಣ ಅವರು ಅ.12ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಬೆಳಗ್ಗೆ 11ರಿಂದ ಮಧ್ಯಾಹ್ನ 12.45ರವರೆಗೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದರು.

ತಾಳಗುಪ್ಪದಿಂದ ಸಂಚರಿಸುವ ರೈಲು ಸೇವೆಯನ್ನು ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗುವಂತೆ ವಿಸ್ತರಿಸುವ ಚಿಂತನೆಯಿದೆ. ಶಿವಮೊಗ್ಗದಿಂದ ಶೃಂಗೇರಿ ಮೂಲಕ ಮಂಗಳೂರಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಡಿಪಿಆರ್ ಅಂತಿಮ ಹಂತದಲ್ಲಿದ್ದು, ಸರ್ವೇ ಕಾರ್ಯಕ್ಕಾಗಿ 30.19 ಕೋಟಿ ರೂ. ಮಂಜೂರಾಗಿದೆ. ಭದ್ರಾವತಿ-ಚಿಕ್ಕಜಾಜೂರು ರೈಲು ಮಾರ್ಗ ಹಾಗೂ ಶಿವಮೊಗ್ಗ- ಬೀರೂರು ಮಾರ್ಗದ ಡಬ್ಲಿಂಗ್ ಸೇರಿ ಹಲವು ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗದ ಕಾಮಗಾರಿ, ಭೂಸ್ವಾಧೀನ ಮತ್ತು ಪರಿಹಾರ ವಿತರಣೆ ವಿಚಾರಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ರೈತರಿಗೆ ಪರಿಹಾರ ನೀಡುವುದು ಹಾಗೂ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ತ್ವರಿತಗೊಳಿಸಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಿಂದ ವಿವಿಧ ರಾಜ್ಯಗಳಿಗೆ ರೈಲುಗಳನ್ನು ಆರಂಭಿಸುವ ಕುರಿತು ಈಗಾಗಲೇ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ ಕೆಲ ತಾಂತ್ರಿಕ ಹಾಗೂ ಭೂಸ್ವಾಧೀನ ಸಂಬಂಧಿತ ಸಮಸ್ಯೆಗಳಿಂದ ಅನುಷ್ಠಾನ ವಿಳಂಬವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಲಾಗುವುದು. ವಿಶೇಷವಾಗಿ ತಾಳಗುಪ್ಪ-ಹುಬ್ಬಳ್ಳಿ ರೈಲು ಸಂಪರ್ಕದ ಸರ್ವೇ ಹಾಗೂ ಪರ್ಯಾಯ ಮಾರ್ಗಗಳ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಸರ್ವೇ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.

ಆಧುನಿಕ ಎಲ್‌ಎಚ್‌ಬಿ ಬೋಗಿಗಳ ಕೊಡುಗೆ

ಶಿವಮೊಗ್ಗ-ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಉತ್ತಮ ಪ್ರಯಾಣಾನುಭವ ಒದಗಿಸುವ ನಿಟ್ಟಿನಲ್ಲಿ, ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಹಾಗೂ ತಾಳಗುಪ್ಪ-ಶಿವಮೊಗ್ಗ ಟೌನ್ ರೈಲುಗಳೂ ಸೇರಿ ನೈರುತ್ಯ ರೈಲ್ವೆಯ ಆರು ರೈಲುಗಳಲ್ಲಿ (ಪರಸ್ಪರ ಮೂಲ ನಿಲ್ದಾಣ ಮತ್ತು ಗಮ್ಯನಿಲ್ದಾಣಗಳ ನಡುವೆ) ಹಳೆಯ ಬೋಗಿಗಳ ಬದಲಿಗೆ ಆಧುನಿಕ ಎಲ್‌ಎಚ್‌ಬಿ (ಲಿಂಕ್-ಹಾಫ್‌ಮನ್-ಬುಷ್) ಬೋಗಿಗಳನ್ನು ಅಳವಡಿಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ದೇಶದ ರೈಲ್ವೆ ವ್ಯವಸ್ಥೆ ಆಧುನೀಕರಣದ ಜತೆಗೆ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಸೇವೆ ಒದಗಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಸೇವೆಗಳು ಲಭ್ಯವಾಗುತ್ತಿವೆ. ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ, ನೆರವುಗಳು ಇದೇ ರೀತಿ ಮುಂದುವರಿಯುವ ವಿಶ್ವಾಸವಿದೆ ಎಂದಿದ್ದಾರೆ. ಆಧುನಿಕ ಬೋಗಿಗಳ ಅಳವಡಿಕೆಯಿಂದ ಪ್ರಯಾಣದ ಗುಣಮಟ್ಟ ಸುಧಾರಿಸಲಿದೆ. ಮುಖ್ಯವಾಗಿ ಆಯಾ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಒಟ್ಟು ಸ್ಥಾನಗಳ ಸಂಖ್ಯೆ ಯಥಾಸ್ಥಿತಿಯಲ್ಲಿರಲಿದೆ. ಬೆಂಗಳೂರಿಗೆ ಸಂಚರಿಸುವ ಮಲೆನಾಡಿನ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅ.20ರಿಂದ ಹಾಗೂ ತಾಳಗುಪ್ಪ-ಶಿವಮೊಗ್ಗ ಟೌನ್ ರೈಲಿನಲ್ಲಿ ಅ.21ರಿಂದ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಎಲ್‌ಎಚ್‌ಬಿ ಬೋಗಿಗಳು ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪ್ರಯಾಣಾನುಭವಕ್ಕೆ ಹೆಸರುವಾಸಿ.
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net