

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾಡಳಿತ, ಕೆಂಚನಾಲ ಗ್ರಾಪಂ ಸಹಯೋಗದಲ್ಲಿ ಕಮದೂರು ಗ್ರಾಮದ ಎಂಟು ಎಕರೆ ಪ್ರದೇಶದಲ್ಲಿ 17 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲಕ್ಕೆ ಮನ್ನಣೆ ಇದ್ದು, ಕಲಿತವರಿಗೆ ವಿಪುಲ ಅವಕಾಶಗಳಿವೆ. ಶಿಕ್ಷಣ ಎಂಬುದು ಅಮೂಲ್ಯ ಸಂಪತ್ತು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆ ಜಾರಿಗೊಳಿಸಲಾಗಿದೆ. ಸಾಗರದಲ್ಲಿ 30 ಕೋಟಿ ರೂ. ವೆಚ್ಚದ ಕಾರ್ಮಿಕರ ವಸತಿ ಶಾಲೆ, 20 ಕೋಟಿ ರೂ. ವೆಚ್ಚದ ಅಲ್ಪಸಂಖ್ಯಾತರ ವಸತಿ ಶಾಲೆ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಹಣ ಖಾತೆಗಳಿಗೆ ಶೀಘ್ರ ಜಮೆ ಆಗಲಿದೆ. ಶಕ್ತಿ ಯೋಜನೆ ಸೌಲಭ್ಯಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಚಿದಂಬರ, ಅಧೀಕ್ಷಕ ಇಂಜಿನಿಯರ್ ನಳಿನಾಕ್ಷಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ತಹಸೀಲ್ದಾರ್ ಭರತ್ ರಾಜ್, ತಾಪಂ ಇಒ ನರೇಂದ್ರ ಕುಮಾರ್ ಇತರರಿದ್ದರು.