ತೀರ್ಥಹಳ್ಳಿ: ಕಥಾವಸ್ತು, ನಿರೂಪಣಾ ಶೈಲಿ ಮತ್ತು ಭಾಷೆ ಸೊಗಡು ಉತ್ತಮವಾಗಿ ಬೆಸೆದುಕೊಂಡಾಗ ಕೃತಿ ಓದುಗನನ್ನು ತಲುಪುತ್ತದೆ ಎಂದು ಲೇಖಕಿ ಮೇದಿನಿ ಕೆಸುವಿನಮನೆ ಹೇಳಿದರು.
ಬಾಳೇಬೈಲಿನ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಲೇಖಕ ಹರೀಶ್ ಅವರು ಬರೆದಿರುವ ‘ಚಂದನವ ಕಡಿದು ತೇದೊಡೆ’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಭಾಷಾ ಸೊಗಡನ್ನು ಸಮೃದ್ಧವಾಗಿ ಬಳಸಿಕೊಂಡಿದ್ದಾರೆ. ಲೇಖಕ ಪಾರಂಪರಿಕ ಭಾಷಾ ಶೈಲಿ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.
ಕಥೆಗಳನ್ನು ಓದುವಾಗ ನಗು ಬರುವ ಬೆನ್ನಲ್ಲೇ ನೋವು ಕಾಡುತ್ತದೆ. ಬಾಲ್ಯ ಸಮೃದ್ಧವಾಗಿದ್ದರೆ ಬದುಕು ಸಮೃದ್ಧ ಆಗಿರುತ್ತದೆ. ಬಾಲ್ಯದ ಅನುಭವಗಳನ್ನು ಸೊಗಸಾಗಿ ಕಥೆಗಳ ಮುಖೇನ ಕಟ್ಟಿಕೊಟ್ಟಿದ್ದಾರೆ. ಹಿಂದಿನ ಮತ್ತು ಇಂದಿನ ಮಲೆನಾಡಿನ ಚಿತ್ರಣಗಳಿವೆ ಎಂದರು.
ಲೇಖಕ ಟಿ.ಜಿ.ಹರೀಶ್ ಮಾತನಾಡಿ, ಬಾಲ್ಯದಲ್ಲಿ ನಾನು ಕಂಡ ಮಲೆನಾಡು, ವ್ಯಕ್ತಿಗಳು ಹಾಗೂ ಪ್ರಸ್ತುತ ಬದಲಾಗಿರುವ ಮಲೆನಾಡು ಕಥೆಗಳಿಗೆ ವಸ್ತುಗಳಾಗಿವೆ. ಕರಾವಳಿ ಭಾಗದಲ್ಲಿ ಸಾಕಷ್ಟು ವರ್ಷಗಳಿಂದ ಇದ್ದರೂ ಮಲೆನಾಡಿನ ಭಾಷಾ ಸೊಗಡು ಬರವಣಿಗೆಯಲ್ಲಿ ಆವರಿಸಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಲೇಖಕ ಪ್ರೊ. ನಟರಾಜ್ ಅರಳಸುರುಳಿ, ಭಾಸ್ಕರ ಶೆಟ್ಟಿ, ಟಿ.ಜಿ.ಜಗದೀಶ್, ಗಾಯತ್ರಿ, ವಿಶ್ವನಾಥ ಪ್ರಭು, ಲೇಖಕ ಟಿ.ವಿ.ಸತೀಶ್, ವೈ.ಎ.ಸುರೇಶ್ ಇತರರಿದ್ದರು.