ಶಿವಮೊಗ್ಗ: ನಿಯಮಾನುಸಾರ ಕಂತು ಪಾವತಿಸಿದರೂ ಜೀವ ವಿಮಾ ಪಾಲಿಸಿಯನ್ನು ಪುನರಾರಂಭಿಸದೆ ಸೇವಾನ್ಯೂನತೆ ಎಸಗಿದ ಮುಂಬೈನ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗದ ಹಳೇಬಾರ್ ರಸ್ತೆಯ ನಿವಾಸಿ ನಾಗರಾಜ ಎಂಬುವರು ಐಸಿಐಸಿಐ ಬ್ಯಾಂಕ್ ಮೂಲಕ ಕಂಪನಿಯೊಂದರಲ್ಲಿ ಜೀವ ವಿಮಾ ಪಾಲಿಸಿಯನ್ನು ವಾರ್ಷಿಕ ಕಂತು 65,460 ರೂ.ನಂತೆ 2019ರ ಜೂ.30ರಿಂದ 2046ರ ಜೂ.30ರವರೆಗೆ ಪಡೆದುಕೊಂಡಿದ್ದರು. 2024ರ ಕಂತು ಪಾವತಿಯಾಗದಿರುವುದನ್ನು ಗಮನಿಸಿ ದಂಡ ಸಹಿತ 82,467 ರೂ. ಗಳನ್ನು 2025ರ ಮೇ 7ರಂದು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತದನಂತರ 2025ರ ಜುಲೈ 9ರಂದು ಕಂತು 78,688 ರೂ.ಗಳನ್ನು ಪಾವತಿಸಿ, ಪಾಲಿಸಿಯನ್ನು ಪುನರಾರಂಭಿಸಲು (ರಿವೈವಲ್) ಕೋರಿದ್ದರು.
ಕಂಪನಿಯ ಸೂಚನೆಯಂತೆ ಅಧಿಕೃತ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ವರದಿ ನೀಡಿದರೂ, ವಿಮಾ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಪಾಲಿಸಿಯನ್ನು ಪುನರಾರಂಭಿಸಿರಲಿಲ್ಲ. ನೋಟೀಸ್ ನೀಡಿದರೂ ಸ್ಪಂದಿಸದ ಕಾರಣ ದೂರುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಉಭಯ ಪಕ್ಷಕಾರರ ವಾದ-ವಿವಾದಗಳನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ವಿಮಾ ಕಂಪನಿಯು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ವಿಮಾ ಕಂಪನಿಯು ನಾಗರಾಜ ಅವರಿಗೆ ಬರಬೇಕಾದ ವಿಮಾ ಕಂತಿನ ಮೊತ್ತವನ್ನು ಪಡೆದು 45 ದಿನದೊಳಗೆ ಪಾಲಿಸಿ ಪುನರಾರಂಭಿಸಬೇಕು. ತಪ್ಪಿದಲ್ಲಿ ಪಾಲಿಸಿ ಪುನರಾರಂಭಿಸುವವರೆಗೆ ಪ್ರತಿದಿನ 100 ರೂ.ನಂತೆ ದೂರುದಾರರಿಗೆ ಪಾವತಿಸಬೇಕು. ಮಾನಸಿಕ ಹಿಂಸೆಗೆ 30 ಸಾವಿರ ರೂ. ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ 10 ಸಾವಿರ ರೂ. ಅನ್ನು 45 ದಿನದೊಳಗೆ ದೂರುದಾರರಿಗೆ ಪಾವತಿಸಬೇಕು. ನಿಗದಿತ 45 ದಿನಗಳೊಳಗೆ ಮೊತ್ತ ಪಾವತಿಸದಿದ್ದರೆ ಶೇ.10ರಷ್ಟು ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ.