ಏರ್‌ಪೋರ್ಟ್ ವಿಷಯದಲ್ಲಿ ರಾಜಕೀಯ ಬೇಡ airport politics

ಶಿವಮೊಗ್ಗ: ಇದೇ ತಿಂಗಳು ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವ ಶಿವಮೊಗ್ಗ ಏರ್‌ಪೋರ್ಟ್ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮುಂದೆ ಸುಗಮ ವಿಮಾನ ಹಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೈಜೋಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ.ಯೋಗೇಶ್ ಹೇಳಿದರು.
airport politics
ಎಚ್.ಸಿ.ಯೋಗೇಶ್, ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ
Published on: 

ಶಿವಮೊಗ್ಗ: ಇದೇ ತಿಂಗಳು ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವ ಶಿವಮೊಗ್ಗ ಏರ್‌ಪೋರ್ಟ್ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮುಂದೆ ಸುಗಮ ವಿಮಾನ ಹಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೈಜೋಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ.ಯೋಗೇಶ್ ಹೇಳಿದರು.

ಇತ್ತೀಚೆಗೆ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಮಾನ ನಿಲ್ದಾಣದ ಇಂದಿನ ಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಎಲ್ಲ ಲೋಪಗಳನ್ನೂ ಹೇರುವ ಯತ್ನ ಮಾಡಿದ್ದಾರೆ. ಆದರೆ ವಿಮಾನ ನಿಲ್ದಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರದ ಯಾವ ಜವಾಬ್ದಾರಿಯೂ ಇರಲಿಲ್ಲವೆ? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಯೋಗೇಶ್ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಉಪಕರಣ ಅಳವಡಿಕೆಗೆ 12.50 ಕೋಟಿ ರೂ. ನೆರವು ನೀಡಿದೆ. ಉಡಾನ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲು 5.60 ಕೋಟಿ ರೂ.ಗಳನ್ನು ಪಾವತಿಸಿದೆ. ಪ್ರತಿದಿನ 156 ಜನರ ಸಂಚಾರಕ್ಕೆ ಪ್ರತಿಯೊಬ್ಬರ ಪಾಲು ತಲಾ 500 ರೂ.ನಂತೆ ರಾಜ್ಯ ಸರ್ಕಾರ ನೀಡಿದೆ. ನೈಟ್ ಲ್ಯಾಂಡಿಂಗ್ ಕಾಮಗಾರಿ ಶೇ.99ರಷ್ಟು ಪೂರ್ಣಗೊಂಡಿದೆ. ಇದರ ಬಗ್ಗೆ ಲೋಕಸಭಾ ಸದಸ್ಯರು ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಡಾನ್ ಸೌಲಭ್ಯ ಪಡೆಯುತ್ತಿದ್ದ ಸ್ಪೈಸ್ ಮತ್ತು ಇಂಡಿಗೋ ಸಂಸ್ಥೆಯವರು ತಮ್ಮ ವಿಮಾನಗಳ ಹಾರಾಟವನ್ನು ಒಂದು ವರ್ಷ ಮುಂಚೆಯೇ ಏಕೆ ನಿಲ್ಲಿಸಿದರು? ಅದು ಕೇಂದ್ರದ ವೈಫಲ್ಯವಲ್ಲವೇ? ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ್ದೇ ಹೆಚ್ಚು ಪಾತ್ರವಿದೆ ಎನ್ನುವ ಸಂಸದರು ಕೇಂದ್ರದಿಂದ ಉಡಾನ್ ಯೋಜನೆಯನ್ನು ಮುಂದುವರಿಸುವಂತೆ ನೋಡಿಕೊಳ್ಳಬೇಕಿತ್ತು ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಮಲಾಕೃತಿಯಲ್ಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಿರ್ಮಿಸಿದ್ದರು. ಈಗ ಕಮಲ ಒಣಗುತ್ತಿದೆ. ನೀರು ಹಾಕಿ ಕಮಲವನ್ನು ಉಳಿಸಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಟಿ.ಹಾಲಪ್ಪ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಕಲೀಂ ಪಾಷಾ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಒ.ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಎಸ್.ಗಿರೀಶ್ ರಾವ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಚ್.ಪಿ.ಗಿರೀಶ್, ಯು.ಶಿವಾನಂದ್, ವಿಶ್ವನಾಥ ಕಾಶಿ, ಶಾಮಸುಂದರ್ ಮುಂತಾದವರಿದ್ದರು.