ನೈಟ್ ಲ್ಯಾಂಡಿಂಗ್ ಮತ್ತೆ ಮುಂದಕ್ಕೆI night landing

ನಂಜಯ್ಯನ ಮಠ್, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ನಂಜಯ್ಯನ ಮಠ್, ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ವಿಮಾನ ನಿಲ್ದಾಣದಲ್ಲಿ ಕಾಮಗಾರಿ ಬೇಗ ಪೂರ್ಣವಾಗುವ ನಿರೀಕ್ಷೆ
  • ನಿಗಮದ ನಂಜಯ್ಯನಮಠ್ ಮಾಹಿತಿ
  • ಮೂರು ವರ್ಷ ನವೀಕರಣ ಸಮಸ್ಯೆ ಇಲ್ಲ
ಶಿವಮೊಗ್ಗ: ರಾತ್ರಿ ವೇಳೆ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗ(shivamogga) ಏರ್‌ಪೋರ್ಟ್‌ (airport) ನಲ್ಲಿ ನೈಟ್ ಲ್ಯಾಂಡಿಂಗ್(night landing) ವ್ಯವಸ್ಥೆ ಅಳವಡಿಕೆ ಮತ್ತೆ ಆರು ತಿಂಗಳು ಮುಂದೂಡಲ್ಪಟ್ಟಿದೆ. ಆರು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಅಳವಡಿಸಲಾಗುವುದು ಎಂದು 2025ರ ಅಕ್ಟೋಬರ್‌ನಲ್ಲಿ ಭರವಸೆ ನೀಡಿದ್ದ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್, ಇದೀಗ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ.
ನೈಟ್ ಲ್ಯಾಂಡಿಂಗ್ ಅಳವಡಿಕೆ ಸಂಬಂಧ ಆರು ಕೋಟಿ ರೂ. ವೆಚ್ಚದ ಕಾಮಗಾರಿ ಇದೇ ತಿಂಗಳಲ್ಲಿ ಆರಂಭವಾಗಲಿದೆ. ಶೀಘ್ರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯೂ ವಿಮಾನ ಟೇಕಾಫ್ ಹಾಗೂ ಲ್ಯಾಂಡಿಂಗ್ ಮಾಡಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆ ಇತ್ಯರ್ಥಗೊಳಿಸಿ ಆಡಳಿತಾತ್ಮಕ ಅಡತಡೆ ನಿವಾರಿಸಲಾಗಿದೆ. ಬಾಕಿಯಿದ್ದ 22 ಲಕ್ಷ ರೂ. ಪಾವತಿಸಲಾಗಿದೆ. ಮೂರು ವರ್ಷ ಪರವಾನಗಿ ನವೀಕರಣ ಅವಶ್ಯವಿಲ್ಲ ಎಂದು ತಿಳಿಸಿದರು.
ಹವಾಮಾನ ವೈಪರೀತ್ಯ ಹಾಗೂ ಮತ್ತಿತರ ಹಲವು ಕಾರಣಗಳಿಗಾಗಿ ವಿಮಾನಗಳು ಲ್ಯಾಂಡಿಂಗ್ ಆಗದೆ ಮರಳಿದ ನಿದರ್ಶನಗಳಿವೆ. ರಾತ್ರಿ ಸಂಚಾರ ಹಾಗೂ ಸರಕು ಸಾಗಣೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು. ವಿಮಾನ ನಿಲ್ದಾಣದ ಮುಖ್ಯ ಆಡಳಿತಾಧಿಕಾರಿ ಶಮಂತ್ ಸುದ್ದಿಗೋಷ್ಠಿಯಲ್ಲಿದ್ದರು.


ಮಣ್ಣಿನ ಪರೀಕ್ಷೆ, ಉಡಾನ್ ಯೋಜನೆ

ನೈಟ್ ಲ್ಯಾಂಡಿಂಗ್ ಅಳವಡಿಕೆಗೂ ಮುನ್ನ ಈ ಭಾಗದ ಮಣ್ಣಿನ ಗುಣಮಟ್ಟ ಪರೀಕ್ಷೆಗಾಗಿ ಮಾದರಿ ರವಾನಿಸಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆಯಿದೆ ಎಂದು ನಂಜಯ್ಯನಮಠ್ ಹೇಳಿದರು. ಶಿವಮೊಗ್ಗದಿಂದ ಬೆಂಗಳೂರು, ತಿರುಪತಿ, ಹೈದರಾಬಾದ್, ಗೋವಾಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಉಡಾನ್ ಯೋಜನೆ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಉಡಾನ್ ಯೋಜನೆ ಮುಂದುವರಿಸುವಂತೆ ನಾಗರಿಕ ವಿಮಾನಯಾನ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.
ಏರ್‌ಪೋರ್ಟ್ ವ್ಯಾಪ್ತಿಯಲ್ಲಿ ಕಾಯ್ದಿರಿಸಿರುವ 17 ಎಕರೆ ನಿವೇಶನದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಮತ್ತು ಪಂಚತಾರಾ ಹೋಟೆಲ್ ನಿರ್ಮಿಸುವ ಕುರಿತು ಈಗಾಗಲೇ ನಿಗಮದ ಸಭೆಯಲ್ಲಿ ಚರ್ಚಿಸಲಾಗಿದೆ. ಶೀಘ್ರವೇ ಈ ವಿಷಯ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಭೂಮಿ ನೀಡಿ ಸಹಕರಿಸಿದ ರೈತರ 370 ಕುಟುಂಬಗಳಿಗೆ ಅಂದಿನ ಅಧಿಕಾರಿ-ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ನಿವೇಶನ ನೀಡಿರುವುದಿಲ್ಲ. ಈ ಬಗ್ಗೆ ಸಂತ್ರಸ್ತರು ಅನೇಕ ಬಾರಿ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ. ನ್ಯಾಯಾಲಯ ಕೂಡ ಸಂತ್ರಸ್ತರ ಪರ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಇತ್ಯರ್ಥಕ್ಕೆ ಖುದ್ದಾಗಿ ಮುಖ್ಯಮಂತ್ರಿ ಗಮನಸೆಳೆದು ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net