ನಾಗೇಂದ್ರ ಸಣ್ಣ ಮೀನು, ವಾಲ್ಮೀಕಿ ಹಗರಣದಲ್ಲಿ ತಿಮಿಂಗಿಲಗಳಿವೆ | Valmiki scandal

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ
  • 185 ಕೋಟಿ ರೂ. ಸಂಪೂರ್ಣವಾಗಿ ನಿಗಮಕ್ಕೆ ವಾಪಸ್ ಬರಬೇಕು
  • ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ
ಶಿವಮೊಗ್ಗ: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ(Karnataka Valmiki Development Corporation)ದ ಬಹುಕೋಟಿ ಹಗರಣದಲ್ಲಿ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಹೋರಾಟ ಸೀಮಿತವಾಗಿಲ್ಲ. ಹಗರಣದಲ್ಲಿ ಭಾಗಿಯಾಗಿರುವ ದೊಡ್ಡ ದೊಡ್ಡ ತಿಮಿಂಗಿಲಗಳ ಹೆಸರು ಬಹಿರಂಗವಾಗಬೇಕು ಮತ್ತು 185 ಕೋಟಿ ರೂ. ಸಂಪೂರ್ಣವಾಗಿ ನಿಗಮಕ್ಕೆ ವಾಪಸ್ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President B.Y.Vijayendra) ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಕೋಟಿ ಹಗರಣದಲ್ಲಿ ನಾಗೇಂದ್ರ ಒಂದು ಸಣ್ಣ ಮೀನು ಅಷ್ಟೇ. ಅದರಲ್ಲಿ ದೊಡ್ಡ ದೊಡ್ಡ ತಿಮಿಂಗಿಲ(Whale)ಗಳು ಭಾಗಿಯಾಗಿವೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 185 ಕೋಟಿ ರೂ. ವಾಪಸ್ ನಿಗಮದ ಖಾತೆಗೆ ಜಮೆಯಾಗಬೇಕು. ಆ ಹಣ ಸಮುದಾಯದ ಅಭಿವೃದ್ಧಿಗೆ ತಲುಪಿದಾಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ. ನಾಗೇಂದ್ರ ಅವರ ರಾಜೀನಾಮೆ ಎಷ್ಟು ಮುಖ್ಯವೋ, ಕೋಟ್ಯಂತರ ರೂ. ವಾಪಸ್ ಹೋಗಿ ಆ ಸಮುದಾಯದ ಅಭಿವೃದ್ಧಿಗೆ ತಲುಪುವುದು ಕೂಡ ಅಷ್ಟೇ ಮುಖ್ಯ ಎಂದರು.
ಹಗರಣದ ಹಣದ ಲೆಕ್ಕಾಚಾರ ಇನ್ನೂ ಸಿಕ್ಕಿಲ್ಲ. ಜಾರಿ ನಿರ್ದೇಶನಾಲಯ(Enforcement Directorate)ದ (ಇಡಿ) ಉಲ್ಲೇಖವಾಗಿರುವ ಹಣದ ಬಳಕೆ ಹಾಗೂ ವಿವಿಧ ಖರೀದಿಗಳ ಕುರಿತು ಸತ್ಯಾಸತ್ಯತೆ ಬಹಿರಂಗವಾಗಬೇಕು. ಕಾಂಗ್ರೆಸ್ ಹೈಕಮಾಂಡ್‌ಗೂ ಕಪ್ಪ ಕಾಣಿಕೆ ಸಲ್ಲಿಕೆಯಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಇದರ ಹಿಂದಿರುವ ಸತ್ಯ ಬಹಿರಂಗವಾಗಬೇಕು. ಹಾಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಬಿ.ನಾಗೇಂದ್ರ(B.Nagendra) ಅವರಿಗೆ ಯಾವುದೇ ಕ್ಲೀನ್‌ಚಿಟ್(Clean chit) ಸಿಕ್ಕಿರಲಿಲ್ಲ. ಆದರೂ ತರಾತುರಿಯಲ್ಲಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ ವಿಜಯೇಂದ್ರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಆಸಕ್ತಿ ಇರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದು ಕಾಂಗ್ರೆಸ್ ಹೈಕಮಾಂಡ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌(Congress High Command)ನ ಪಾಲೂ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಿಗಮದ ಲೆಕ್ಕ ಅಧೀಕ್ಷಕ, ಶಿವಮೊಗ್ಗದ ಚಂದ್ರಶೇಖರನ್ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಕುಟುಂಬಕ್ಕೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಪಿಎಫ್ ಸೇರಿ ಬರಬೇಕಾದ ಸೌಲಭ್ಯಗಳು ದೊರೆತಿಲ್ಲ. ಇದರಿಂದ ಸರ್ಕಾರ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗುತ್ತದೆ ಎಂದು ವಿಜಯೇಂದ್ರ ಕಿಡಿಕಾರಿದರು.

ನಾಮಕಾವಸ್ತೆಗೆ ಬರ ಘೋಷಣೆ

ರಾಜ್ಯಾದ್ಯಂತ ಅನವೃಷ್ಟಿ ಆವರಿಸಿದ್ದರೂ ಕೇವಲ 101 ತಾಲೂಕುಗಳನ್ನು ಮಾತ್ರ ತರಾತುರಿಯಲ್ಲಿ ಬರಪೀಡಿತ ಎಂದು ಘೋಷಿಸಿರುವುದು ನಾಮಕಾವಸ್ಥೆಗೆ ಸಾಕ್ಷಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.  ಬಹಳಷ್ಟು ತಾಲೂಕುಗಳಲ್ಲಿರುವ ಬರದ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. ಬರದ ವಿಚಾರವನ್ನು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಸರಿಯಾದ ವರದಿ ಸಲ್ಲಿಸುವಲ್ಲಿಯೂ ವಿಫಲವಾಗುತ್ತಿದೆ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net