ಶಾಸಕ ಎಸ್.ಎನ್.ಚನ್ನಬಸಪ್ಪ ಸಭೆ ನಡೆಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳ ದೂರು ಆಲಿಸಿದರು. ಕೆ.ವಿ.ವಸಂತಕುಮಾರ್, ಗೋಪಾಲ್, ನಾಗರಾಜ್ ಶೆಟ್ಟರ್, ಸೋಮಶೇಖರ್, ರಘುಪತಿ, ಜನಮೇಜಿ ರಾವ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರಿಯಾದ ಸಮಯಕ್ಕೆ ಸಭೆಗೆ ಬಾರದ ಸಿಬ್ಬಂದಿ
ಶಿವಮೊಗ್ಗ ಶಾಸಕರ ಹಿಡಿತಕ್ಕೆ ಸಿಗದ ಅಧಿಕಾರಿಗಳು
ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳ ಅನಾವರಣ
ಶಿವಮೊಗ್ಗ: ನಗರದಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಕೈವಶವಾಗಿ ಎರಡು ವರ್ಷ ಕಳೆದಿದೆ. ಎಸ್.ಎನ್.ಚನ್ನಬಸಪ್ಪ ಶಾಸಕ (mla) ರಾಗಿ ಮೂರು ವರ್ಷ ಸಮೀಪಿಸುತ್ತಿದ್ದರೂ ಅಧಿಕಾರಿ (officer)ಗಳು ಅವರ ಹಿಡಿತಕ್ಕೆ ಸಿಲುಕುತ್ತಿಲ್ಲ. ಇನ್ಸ್‌ಪೆಕ್ಟರ್ (inspector) ಹಂತದ ಅಧಿಕಾರಿಯನ್ನು ಸ್ವತಃ ಶಾಸಕರೇ ಠಾಣೆಗೆ ಹೋಗಿ ಮಾತನಾಡಿಸಬೇಕಾದ ಸ್ಥಿತಿ ಇದೆ. ಶಾಸಕರ ಸಭೆಗಳಿಗೆ ಅಧಿಕಾರಿಗಳು ಯಾವ ಮಟ್ಟದ ಸ್ಪಂದನೆ ನೀಡುತ್ತಾರೆ ಎಂಬುದು ಸೋಮವಾರ ಮತ್ತೊಮ್ಮೆ ಸಾಬೀತಾಯಿತು.
ಶಾಸಕರು ತಮ್ಮ ಕಚೇರಿಯಲ್ಲಿ (ಕರ್ತವ್ಯ ಭವನ) ಸೋಮವಾರ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳ ಸಭೆ ಕರೆದಿದ್ದರು (ಈವರೆಗೆ ಕರೆದ ಹಲವು ಸಭೆಗಳಂತೆ). ಅದು ನಗರದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಬೆಳಗ್ಗೆ 11ಕ್ಕೆ ಸಭೆ ಆಯೋಜನೆಯಾಗಿತ್ತು. ಆದರೆ ಮೆಸ್ಕಾಂ ಅಧಿಕಾರಿಗಳು ಸಭೆಗೆ ಬಂದಿದ್ದು ಒಂದು ತಾಸು ತಡವಾಗಿ.
ಅಷ್ಟೊತ್ತಿಗಾಗಲೇ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಶಿವಮೊಗ್ಗದಲ್ಲಿ ತಾವು ಕಂಡಿರುವ ಅವ್ಯವಸ್ಥೆಗಳನ್ನೆಲ್ಲ ಪಟ್ಟಿ ರೂಪದಲ್ಲಿ ವಿವರಿಸಿದ್ದರು. ಯಾವ ಹಂತದಲ್ಲೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಯಾವುದೂ ಸಮಪರ್ಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ತಡವಾಗಿ ಬಂದ ಅಧಿಕಾರಿಗಳತ್ತ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ನೀವೇನು ದಿಲ್ಲಿಯಲ್ಲಿದ್ದೀರಾ? ಕಾರ್ಪೋರೇಷನ್ ಅವರಿಗೆ ಪುರುಸೊತ್ತಿಲ್ಲ. ನಿಮಗೂ ಪುರುಸೊತ್ತಿಲ್ವೆ? ಹುಡುಗಾಟ ಮಾಡ್ತಾ ಇದ್ದೀರಾ? ನಿಮಗೆ ಜವಾಬ್ದಾರಿ ಇಲ್ವಾ? ನಾನು 11 ಗಂಟೆಗೆ ಸಭೆ ಕರೆದಿದ್ದು, ನೀವು ನೋಡಿದರೆ 12 ಗಂಟೆಗೆ ಬಂದಿದ್ದೀರಲ್ಲಾ. ಸಭೆಯಲ್ಲಿ ನಿಮ್ಮ ಉಪಸ್ಥಿತಿ ನಮಗೆ ಅವಶ್ಯಕತೆ ಇಲ್ಲ. ನೀವು ಹೋಗಬಹುದು ಎಂದು ಕೋಪ ಶಮನ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದನ್ನು ಗಮನಿಸಿದ ಸಭೆಯಲ್ಲಿದ್ದ ಕೆಲವರು ಪಾಪ ಶಾಸಕರು ಅಸಹಾಯಕರು ಎಂದು ಪಿಸುಪಿಸು ಮಾತನಾಡಿಕೊಂಡರು.
ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳ ಆಕ್ರೋಶ
ಸಭೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬಾಕಿ ಇದ್ದ ಭೂಗತ ಕೇಬಲ್ ಕಾಮಗಾರಿ ಬಗ್ಗೆ ಐದು ತಿಂಗಳ ಹಿಂದೆ ಸಭೆ ಕರೆಯವುದಾಗಿ ಭರವಸೆ ನೀಡಿದ್ದೀರಿ. ಆದರೆ ಈವರೆಗೂ ಸಭೆ ಕರೆದಿಲ್ಲ. ನಾವು ನೀಡಿದ ಮನವಿಗೆ ಮೆಸ್ಕಾಂ ಸ್ಪಂದಿಸುತ್ತಿಲ್ಲ ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು. ಆರು ಲೇಔಟ್‌ಗಳಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಬಾಕಿಯಿದೆ. ಭದ್ರಾವತಿಗೆ ತೆರಳುವ ನಗರದ ಮಾರ್ಗದಲ್ಲಿ ಹೆದ್ದಾರಿಗೆ ವಿದ್ಯುತ್ ದೀಪ ಅಳವಡಿಸುವಂತೆ ಎರಡು ವರ್ಷದ ಹಿಂದೆ ಮನವಿ ಮಾಡಲಾಗಿತ್ತು. ಪುರಲೆ ರಸ್ತೆಗೆ ದೀಪ ಹಾಕಿಸಲು ಸಾಧ್ಯ ಆಗುವುದಾದರೆ ಭದ್ರಾವತಿ ಮಾರ್ಗಕ್ಕೆ ಏಕೆ ಬೀದಿ ದೀಪ ಹಾಕಿಸುವುದಿಲ್ಲ ಎಂದು ಕಿಡಿಕಾರಿದರು. ಹೈದರಾಬಾದ್‌ನಂತೆ ಶಿವಮೊಗ್ಗ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಉಚಿತ ಶೌಚಗೃಹ ವ್ಯವಸ್ಥೆ ಜಾರಿಯಾಗಲಿ. ಸ್ಮಾರ್ಟ್ ಸಿಟಿಯಲ್ಲಿ ನಿರ್ಮಾಣವಾದ ಪಾದಚಾರಿ ಮಾರ್ಗಗಳು ಕಿತ್ತುಹೋಗಿವೆ. ಇಂಜಿನಿಯರ್‌ಗಳು ಗಮನಿಸುತ್ತಿಲ್ಲ. ಸೂಡಾ ಕಚೇರಿ ಪಕ್ಕದ ರಸ್ತೆಗೆ ಹಾಕಿರುವ ಅನಧಿಕೃತ ಶೆಡ್ ಇನ್ನೂ ತೆರವಾಗಿಲ್ಲ ಎಂದು ದೂರಿದರು. ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಅಧ್ಯಕ್ಷ ಗೋಪಾಲ್, ಪ್ರಮುಖರಾದ ಕೆ.ವಿ.ವಸಂತಕುಮಾರ್, ನಾಗರಾಜ್ ಶೆಟ್ಟರ್, ರಘುಪತಿ. ಸೋಮಶೇಖರ್ ಮುಂತಾದವರಿದ್ದರು.
ವಾಹನ ನಿಲುಗಡೆಗೆ ಬಳಸಿ
ಮಳೆ ಬಂದಾಗ ಗೋಪಾಲ ಗೌಡ ಬಡಾವಣೆ ಸಿ ಬ್ಲಾಕ್‌ನ 90 ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಜೈಲ್ ರಸ್ತೆ, ರಾಜಕಾಲುವೆಯಲ್ಲೂ ಸಮಸ್ಯೆ ಇದೆ. ಮೀನಾಕ್ಷಿ ಭವನದ ಎದುರು ಸರ್ಕಾರಿ ಕಾಲೇಜು ಇರುವುದರಿಂದ ಆ ರಸ್ತೆಯ ಎರಡೂ ಕಡೆ ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್‌ಪಾತ್ ನಿರ್ಮಾಣ ಮಾಡಬೇಕು. ಎಂಆರ್‌ಎಸ್ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಶೆಲ್ಟರ್ ನಿರ್ಮಿಸಬೇಕು. ಶಿವಮೊಗ್ಗದಲ್ಲಿರುವ ಕನ್ಸರ್ವೆನ್ಸಿಗಳನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಸಲಹೆ ನೀಡಿದರು.