ಶಾಲೆಯಲ್ಲಿ ಅಡಿಗೆ ಪರಿಕರ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ
ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧಿಸಿದ ಪೊಲೀಸರು
ಭದ್ರಾವತಿಯ ರಾಜಣ್ಣ ಅಲಿಯಾಸ್ ಕಾರ್ಪೆಂಟರ್ ರಾಜಣ್ಣ ಬಂಧಿತ ವ್ಯಕ್ತಿ
ಶಿವಮೊಗ್ಗ: ಭದ್ರಾವತಿಯ ಜೆಪಿಎಸ್ ಶಾಲೆಯಲ್ಲಿ ಅಡುಗೆ ಪರಿಕರ ಮತ್ತು ಗ್ಯಾಸ್ ಸಿಲಿಂಡರ್(Gas cylinder) ಕಳ್ಳತನ ಪ್ರಕರಣ(Theft case)ದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಭದ್ರಾವತಿ ಪೇಪರ್‌ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ರಾಜಣ್ಣ ಅಲಿಯಾಸ್ ಕಾರ್ಪೆಂಟರ್ ರಾಜಣ್ಣ ಬಂಧಿತ ವ್ಯಕ್ತಿ. 2013ರಲ್ಲಿ ಜೆಪಿಎಸ್ ಶಾಲೆ(JPS School)ಯಲ್ಲಿ ಅಡುಗೆ ಪರಿಕರ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಆನಂತರ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು. ತದನಂತರ ಜಾಮೀನಿನ ಮೇಲೆ ಹೊರಬಂದಿದ್ದ ರಾಜಣ್ಣ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ 2023ರಲ್ಲಿ ನ್ಯಾಯಾಲಯವು ಎಲ್‌ಆರ್‌ಪಿ ಪ್ರಕರಣ ದಾಖಲಿಸಿ ಬಂಧನದ ವಾರೆಂಟ್(Arrest warrant) ಹೊರಡಿಸಿತ್ತು.
ಪೇಪರ್‌ಟೌನ್ ಠಾಣೆ ಪಿಎಸ್‌ಐ ಎನ್.ಕುಮಾರ್ ನೇತೃತ್ವದಲ್ಲಿ ಎಎಸ್‌ಐ ಕುಮಾರ್, ಮುಖ್ಯಪೇದೆಗಳಾದ ಯಲ್ಲಪ್ಪ, ವಾಸುದೇವ್ ಅವರು ರಾಜಣ್ಣನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.