ಬ್ಯಾಂಕ್ ಮಾಹಿತಿ ಸೈಬರ್ ವಂಚಕರಿಗೆ ನೀಡುತ್ತಿದ್ದವನ ಬಂಧನ । Cyber ​​fraud

ಬಂಧಿತ ಶಿವಮೊಗ್ಗ ತುಂಗಾನಗರ ನಿವಾಸಿ ಕೆ.ಶರತ್ ಕುಮಾರ್ ಅಲಿಯಾಸ್ ಗುಂಡ.
ಬಂಧಿತ ಶಿವಮೊಗ್ಗ ತುಂಗಾನಗರ ನಿವಾಸಿ ಕೆ.ಶರತ್ ಕುಮಾರ್ ಅಲಿಯಾಸ್ ಗುಂಡ.
Published on

ಪ್ರಮುಖ ಮುಖ್ಯಾಂಶಗಳು

  • 18 ಪಾಸ್‌ಬುಕ್‌,25 ಎಟಿಎಂ ಕಾರ್ಡ್, 7 ಚೆಕ್ ಬುಕ್‌, ತಲಾ 2 ಮೊಬೈಲ್, ಕ್ಯೂಆರ್ ಕೋಡ್‌,19 ಬಾಡಿಗೆ ಖಾತೆ ಜಪ್ತಿ
  • ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಕಮೀಷನ್ ಆಮೀಷ
  • ತುಂಗಾನಗರ ನಿವಾಸಿ ಕೆ.ಶರತ್ ಕುಮಾರ್ ಅಲಿಯಾಸ್ ಗುಂಡನನ್ನು ಬಂಧಿಸಿದ ಪೊಲೀಸರು
ಶಿವಮೊಗ್ಗ: ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಕಮೀಷನ್(Commission) ಆಮೀಷವೊಡ್ಡಿ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಸೈಬರ್(Cyber) ವಂಚಕರಿಗೆ ನೀಡುತ್ತಿದ್ದ ಪ್ರಕರಣದಲ್ಲಿ ಶಿವಮೊಗ್ಗ ತುಂಗಾನಗರ ನಿವಾಸಿ ಕೆ.ಶರತ್ ಕುಮಾರ್ ಅಲಿಯಾಸ್ ಗುಂಡ (27) ಎಂಬಾತನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಹಲವು ಬ್ಯಾಂಕ್ ಪಾಸ್‌ಬುಕ್‌(Passbook)ಗಳು, ಎಟಿಎಂ ಕಾರ್ಡ್‌ಗಳು, ಚೆಕ್ ಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ.
ಚಾಲಕನಾಗಿರುವ ಕೆ.ಶರತ್‌ಕುಮಾರ್ ಗೋಪಾಳದಲ್ಲಿ ಟೀ ಅಂಗಡಿ(Tea stall) ನಡೆಸುತ್ತಿದ್ದ ಆತನ ಸ್ನೇಹಿತ ಅಮಿತ್ ಎಂಬಾತನ ಬ್ಯಾಂಕ್ ಖಾತೆಯ ವಿವರ ಪಡೆದಿದ್ದ. ಜತೆಗೆ ಪಾಸ್‌ಬುಕ್, ಎಟಿಎಂ ಕಾರ್ಡ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್(Mobile number) ಅನ್ನು ಕೂಡ ಪಡೆದುಕೊಂಡಿದ್ದ. ಅದಕ್ಕೆ ಪ್ರತಿಯಾಗಿ 15 ದಿನಕ್ಕೊಮ್ಮೆ ಕಮಿಷನ್ ಕೊಡುವುದಾಗಿ ನಂಬಿಸಿದ್ದ. ಕಮಿಷನ್ ಆಸೆಗೆ ಅಮಿತ್ ಬ್ಯಾಂಕ್ ಖಾತೆಯ ಎಲ್ಲ ವಿವರ ಒದಗಿಸಿದ್ದರು.
ಅನುಮಾನಗೊಂಡ ಅಮಿತ್ ಬ್ಯಾಂಕ್ ಪಾಸ್‌ಬುಕ್ ವಾಪಸ್ ಕೇಳಿದಾಗ ಬ್ಯಾಂಕ್ ಖಾತೆ ಫ್ರೀಜ್(Freeze) ಆಗಿದೆ ಎಂದು ಶರತ್‌ಕುಮಾರ್ ತಿಳಿಸಿದ್ದ. ಬಳಿಕ ಅಮಿತ್ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ಹೋಗಿ ತಮ್ಮ ಖಾತೆಯ ಕುರಿತು ವಿಚಾರಿಸಿದ್ದರು. ಈ ಬ್ಯಾಂಕ್ ಖಾತೆಯ ವಿರುದ್ಧ 51 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ  ತಿಳಿಸಿದ್ದರು. ಆತಂಕಗೊಂಡ ಅಮಿತ್ ಸೈಬರ್ ಠಾಣೆಗೆ ದೂರು ನೀಡಿದ್ದರು.
ಶಿವಮೊಗ್ಗದ ಸಿಇಎನ್(CEN) ಪೊಲೀಸರು ಆರೋಪಿ ಶರತ್ ಕುಮಾರ್‌ನನ್ನು ಬಂಧಿಸಿದ್ದಾರೆ. ಆತನಿಂದ ವಿವಿಧ ಬ್ಯಾಂಕ್ ಖಾತೆಗಳ 18 ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್, 7 ಚೆಕ್ ಬುಕ್‌ಗಳು, 2 ಮೊಬೈಲ್ ಫೋನ್‌ಗಳು, 2 ಕ್ಯೂ ಆರ್ ಕೋಡ್‌(QR code)ಗಳು, 19 ಬಾಡಿಗೆ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಈ ಖಾತೆಗಳನ್ನು ಬಳಸಿಕೊಂಡು 55,43,56,248 ರೂ. ಮೊತ್ತ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಅಲ್ಲದೆ 19 ಬಾಡಿಗೆ ಖಾತೆಗಳಿಂದಲೂ ಬರೋಬ್ಬರಿ 11,48,42,898 ರೂ. ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. 
ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಶಿವಮೊಗ್ಗದ ಸೈಬರ್ ಕ್ರೈಮ್ ಡಿವೈಎಸ್‌ಪಿ ಕೃಷ್ಣಮೂರ್ತಿ, ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶರತ್ ಕುಮಾರ್‌ನನ್ನು ಬಂಧಿಸಿದ್ದು, ಈತನಿಗೆ ನ್ಯಾಯಾಂಗ ಬಂಧನವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net