ಜಂತು ಹುಳು ಬಾಧೆಯಿಂದ ಅಪೌಷ್ಟಿಕತೆ I worm effect danger
ಶಿವಮೊಗ್ಗದಲ್ಲಿ ರಾಷ್ಟ್ರೀಯ ಜಂತುಹುಳು ದಿನಾಚರಣೆಯನ್ನು ಡಾ. ಕೆ.ಎಸ್.ನಟರಾಜ್ ಉದ್ಘಾಟಿಸಿದರು. ಡಾ. ಚಂದ್ರಶೇಖರ್, ಡಾ. ಒ.ಮಲ್ಲಪ್ಪ, ಎಚ್.ಎಸ್.ಉಮಾಶಂಕರ್, ಡಾ. ಕಾಂಚನಾ, ಗಂಗೂಬಾಯಿ, ಜಯಮ್ಮ ಇದ್ದರು.
ಜಂತು (worm) ಹುಳುಗಳ ಬಾಧೆಯಿಂದ ದೇಹವು ಪೋಷಕಾಂಶಗಳನ್ನು (vitamins) ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗುತ್ತದೆ. ಜತೆಗೆ ಕಲಿಕೆಯಲ್ಲೂ ಹಿಂದುಳಿಯುತ್ತಾರೆ ಎಂದು ಡಿಎಚ್‌ಒ (dho) ಡಾ. ಕೆ.ಎಸ್.ನಟರಾಜ್ ತಿಳಿಸಿದರು.
ಜಿಲ್ಲಾಡಳಿತದಿಂದ ನಗರದ ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಏಕಾಗ್ರತೆ ಮತ್ತು ಉತ್ತಮ ಆರೋಗ್ಯಕ್ಕಾಗಿ 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಆಲ್ಬೆಂಡಜೋಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಸ್ವಚ್ಛತೆಗೆ ಬಹಳ ಮಹತ್ವ ನೀಡಬೇಕು. ಊಟ ಮಾಡುವ ಮೊದಲು ಮತ್ತು ಶೌಚಗೃಹ ಬಳಕೆ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಮಣ್ಣಿನ ಮೂಲಕ ಜಂತು ಹುಳುಗಳು ದೇಹ ಪ್ರವೇಶಿಸುವುದನ್ನು ತಡೆಯಲು ಮನೆ ಹೊರಗಡೆ ಅಥವಾ ಮಣ್ಣಿನಲ್ಲಿ ಆಟವಾಡುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮುನ್ನ ಚೆನ್ನಾಗಿ ತೊಳೆಯಬೇಕು. ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು ಎಂದು ಸಲಹೆ ನೀಡಿದರು.
ಟಿಎಚ್‌ಒ ಡಾ.ಚಂದ್ರಶೇಖರ್, ಮಿಳಘಟ್ಟ ಶಾಲೆ ಮುಖ್ಯ ಶಿಕ್ಷಕ ಎಚ್.ಎಸ್.ಉಮಾಶಂಕರ್, ಸಿಡಿಪಿಒ ಗಂಗೂಬಾಯಿ, ಊರುಗಡೂರು ವೈದ್ಯಾಧಿಕಾರಿ ಡಾ. ಕಾಂಚನಾ, ಮಹಿಳಾ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜಯಮ್ಮ ಇದ್ದರು.
"
ಮಣ್ಣಿನ ಮೂಲಕ ಹರಡುವ ಜಂತು ಹುಳುಗಳ ಸೋಂಕಿನಿಂದ ಪ್ರಪಂಚದಾದ್ಯಂತ 150 ಕೋಟಿ ಹಾಗೂ ಭಾರತದಲ್ಲಿ 22 ಕೋಟಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. 2015ರಲ್ಲಿ ಕರ್ನಾಟಕದಲ್ಲಿ 1ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಶೇ.49 ಮಂದಿಯಲ್ಲಿ ಜಂತು ಹುಳು ಬಾಧೆ ಕಂಡುಬಂದಿತ್ತು. ನಂತರ ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿವಾರಣಾ ಮಾತ್ರೆ ನೀಡುತ್ತಿರುವುದರಿಂದ ಸೋಂಕಿನ ಪ್ರಮಾಣ ಶೇ.0.22ಕ್ಕೆ ಇಳಿಕೆಯಾಗಿದೆ.