ಮಧು ತಂದೆಯ ನೆರಳಿನಿಂದ ಹೊರಬರಲಿ I madhu should come father influence

ಆರ್.ಕೆ.ಸಿದ್ದರಾಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ
ಆರ್.ಕೆ.ಸಿದ್ದರಾಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ
Published on

ಪ್ರಮುಖ ಮುಖ್ಯಾಂಶಗಳು

  • ಬಂಗಾರಪ್ಪ ಜಪ ಬಿಟ್ಟು ನಿಮ್ಮ ಸಾಧನೆ ಹೇಳಿ
  • ಸಚಿವ ಮಧು ಸಂಯಮದಿಂದ ಮಾತನಾಡಲಿ
  • ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಟೀಕಾಸ್ತ್ರ
ಶಿವಮೊಗ್ಗ: ಮಧು (madhu ) ಬಂಗಾರಪ್ಪ (bangarappa) ಸಚಿವರಾಗಿರುವುದು ಹೋರಾಟ, ಸಾಧನೆಯಿಂದಲ್ಲ. ಅಪ್ಪನ ನಾಮಬಲದಿಂದ. ಬಂಗಾರಪ್ಪ ನನ್ನನ್ನು ಸಚಿವನನ್ನಾಗಿ ಮಾಡಿದ್ದರು. ಹೀಗಾಗಿ ಅವರ ಮಗ ಮಧು ಅವರನ್ನು ಮಂತ್ರಿ ಮಾಡಿದ್ದೇನೆ ಎಂದು ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ (shivakumar) ಹೇಳಿರುವುದೇ ಇದಕ್ಕೆ ಸಾಕ್ಷಿ. ಮಧು ಬಂಗಾರಪ್ಪ ಬಿಜೆಪಿ ಹಾಗೂ ಆ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತನಾಡುವ ಬದಲು ತಮ್ಮ ಮಾತಿನಲ್ಲಿ ಸಂಯಮ ವಹಿಸಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.
ಮಧು ಪ್ರತಿ ಸಂದರ್ಭದಲ್ಲೂ ತಮ್ಮ ತಂದೆಯ ಹೆಸರು ಹೇಳುತ್ತಾರೆ. ಇನ್ನಾದರೂ ಅವರು ತಂದೆಯ ನೆರಳಿನಿಂದ ಹೊರಬಂದು ರಾಜಕೀಯ ಮಾಡಲಿ. ಸ್ವಂತ ಛಾಪು ಮೂಡಿಸಲಿ. ಅವರ ಸಾಧನೆಯನ್ನು ಹೇಳಿಕೊಳ್ಳಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.
ಕಸ್ತೂರಿ ರಂಗನ್ ವರದಿಯನ್ನು ಅರೆದು ಕುಡಿದಂತೆ ಮಾತನಾಡುವ ಮಧು ಬಂಗಾರಪ್ಪ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ವೃಥಾ ಲಘುವಾಗಿ ಟೀಕಿಸುತ್ತಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಅವರ ತಂದೆ ಬಂಗಾರಪ್ಪ ಎದುರಾಳಿಗಳನ್ನು ಟೀಕಿಸುವಾಗಲೂ ಸಭ್ಯತೆ ಮೀರುತ್ತಿರಲಿಲ್ಲ. ಬಂಗಾರಪ್ಪ ಬಿಜೆಪಿಗೆ ಬಂದಾಗಲೂ ನಾವು ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೆವು ಎಂದರು.
ಬಂಗಾರಪ್ಪ ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ್ದರು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದರೂ ಅವರು ಬೇರೆಯವರಿಗೆ ಗೌರವ ಕೊಡುತ್ತಿದ್ದರು. ನಾವೂ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದೆವು. ಆದರೆ ನೀವು ಮಧು ಅಷ್ಟೇ. ಬಂಗಾರಪ್ಪ ಅಲ್ಲ. ಬಂಗಾರಪ್ಪ ಆಗುವ ಸಾಮರ್ಥ್ಯ ನಿಮ್ಮಲ್ಲಿಲ್ಲ. ನೀವು ಅಷ್ಟು ಸಾಧನೆಯನ್ನೂ ಮಾಡಿಲ್ಲ. ಅವರ ಗುಣವೂ ನಿಮ್ಮಲ್ಲಿಲ್ಲ. ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಶಿವರಾಜು, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ಪಕ್ಷ ರಾಜಕಾರಣ ಬೇಡ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಪಕ್ಷ ರಾಜಕಾರಣ ಸರಿಯಲ್ಲ. ಈ ವರದಿಯಿಂದ ಮಲೆನಾಡಿನ ಜಿಲ್ಲೆಗಳ ಮೇಲೆ ಗಂಭೀರ ಪರಿಣಾಮವಾಗುತ್ತದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು-ಉಡುಪಿ ಬಿಜೆಪಿ ಸಂಸದರೂ ಸೇರಿದಂತೆ ಪ್ರಮುಖರು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿ ಸಮಾಲೋಚನೆ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್ಪ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅವರಿಗೆ ಕಸ್ತೂರಿ ರಂಗನ್ ವರದಿಯ ಗಂಭೀರತೆ ಅರ್ಥವಾಗಿಲ್ಲ ಎಂದು ಸಿದ್ದರಾಮಣ್ಣ ಕಿಡಿಕಾರಿದರು.
ಗಾಡ್ಗೀಳ್ ವರದಿ ಸಲ್ಲಿಕೆಯಾಗಿದ್ದು ಯುಪಿಎ ಅವಧಿಯಲ್ಲಿ. ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾಗಿದ್ದೂ ಯುಪಿಎ ಅವಧಿಯಲ್ಲೇ. ಈ ಅವಧಿಯಲ್ಲಿ ಪರಿಸರ ಸಚಿವರಾಗಿದ್ದವರು ತಮಿಳುನಾಡಿನ ಜಯಂತಿ ನಟರಾಜನ್, ಚಿಕ್ಕಮಗಳೂರಿನ ಜೈರಾಂ ರಮೇಶ್. ಇವರಿಬ್ಬರಿಗೂ ಕಸ್ತೂರಿ ರಂಗನ್ ವರದಿಯ ಪರಿಣಾಮ ತಿಳಿದಿರಲಿಲ್ಲವೇ ಎಂದು ಸಿದ್ದರಾಮಣ್ಣ ಪ್ರಶ್ನಿಸಿದರು.

ಪರಿಸರ ಕಾಳಜಿ ನಮಗೂ ಇದೆ

ನಮಗೂ ಪರಿಸರ ಉಳಿಯಬೇಕೆಂಬ ಆಸೆಯಿದೆ. ಹಿಮಾಲಯದ ಮೇಲೆ ಹವಾಮಾನ ಬದಲಾವಣೆ ದುಷ್ಪರಿಣಾಮ ಬೀರಿದೆ. 6 ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ಹರಡಿಕೊಂಡಿದ್ದು, ಅದು ಉಳಿಯಬೇಕಾಗಿದೆ. ಅರಣ್ಯದ ಜತೆಗೆ ಜನಜೀವನ ಮತ್ತು ಕೃಷಿಯನ್ನೂ ಉಳಿಸಿಕೊಳ್ಳಬೇಕು. ಹೀಗಾಗಿ ಹೊಸದಾಗಿ ಜಂಟಿ ಸರ್ವೇ ಮಾಡಬೇಕು. ಉಪಗ್ರಹ ಸಮೀಕ್ಷೆಯಿಂದ ಪ್ರಯೋಜನವಿಲ್ಲ. ಕಸ್ತೂರಿ ರಂಗನ್ ಕರಡು ಅಧಿಸೂಚನೆಗಳು ಪ್ರಕಟವಾದಾಗಲೆಲ್ಲ ಬಿಜೆಪಿ ಸಂಸದರು ಅದರ ವಿರುದ್ಧ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಜನರಿಗೆ ತೊಂದರೆ ಆಗದ ರೀತಿಯಲ್ಲಿ ವರದಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪಾತ್ರ ಮಹತ್ವದ್ದು. ಸಿಎಂ ವಿಶೇಷ ಅಧಿವೇಶನ ಕರೆದಿರುವುದು ಉತ್ತಮ ವಿಚಾರ ಎಂದು ಸಿದ್ದರಾಮಣ್ಣ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net