ಬಿಸಿಎಂ ಜಿಲ್ಲಾ ಅಧಿಕಾರಿ ನಿವಾಸ ಸೇರಿ ಏಳು ಕಡೆ ಲೋಕಾ ದಾಳಿ | Lokayukta Raid

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾ
Published on

ಪ್ರಮುಖ ಮುಖ್ಯಾಂಶಗಳು

  • ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆ
  • ಕೆ.ಆರ್.ಶೋಭಾ ಅವರ ನಿವಾಸ ಸೇರಿ ಜಿಲ್ಲೆಯ ಏಳು ಕಡೆ ದಾಳಿ
  • ಎಸ್ಪಿ ಎಂ.ಎಸ್.ಕೌಲಾಪುರೆ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಪರಿಶೀಲನೆ
ಶಿವಮೊಗ್ಗ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ(Property acquisition) ಆರೋಪದ ಹಿನ್ನೆಲೆಯಲ್ಲಿ ದೇವರಾಜ್ ಅರಸು(Devaraj Arasu) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ಜಿಲ್ಲೆಯ ಏಳು ಕಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು.
ಶೋಭಾ ಅವರ ಶಿಕಾರಿಪುರದ ಚನ್ನಕೇಶವನಗರದ 16ನೇ ಕ್ರಾಸ್‌ನ ಮನೆ, ತರ್ಲಘಟ್ಟ ತಾಂಡಾದಲ್ಲಿ ಅತ್ತೆಯ ಮನೆ ಮತ್ತು ಫಾರಂ ಹೌಸ್(Farm House), ಶಿವಮೊಗ್ಗದ ನವುಲೆಯ ಬಾಡಿಗೆ ಮನೆ, ಬಾಲರಾಜ್ ಅರಸ್ ರಸ್ತೆಯ ಕಚೇರಿ, ಸಾಗರ ತಾಲೂಕಿನ ಆನಂದಪುರ ಬಳಿ ಆಚಾಪುರದ ಖಾಸಗಿ ಶಾಲೆ, ಶಾಲೆಯ ಕಾರ್ಯದರ್ಶಿ, ಖೈರಾದ ಸಂತೋಷ್‌ಕುಮಾರ್ ಎಂಬುವರ ಮನೆ, ಶಿವಮೊಗ್ಗದದಲ್ಲಿ ಕಚೇರಿ ಸಹೋದ್ಯೋಗಿ ರಾಘವೇಂದ್ರ ಅವರ ಶಿವಮೊಗ್ಗ ಚಾಲುಕ್ಯನಗರ 4ನೇ ಕ್ರಾಸ್‌ನ ಮನೆ ಮೇಲೆ ದಾಳಿ ನಡೆದಿದೆ.
ಈ ವೇಳೆ ತರ್ಲಘಟ್ಟದಲ್ಲಿ ನಾಲ್ಕು ಎಕರೆ ಜಮೀನು, ಶಿಕಾರಿಪುರದಲ್ಲಿ ಮೂರು ಅಂತಸ್ತಿನ ಮನೆ, 40 ಲಕ್ಷ ರೂ. ಮೌಲ್ಯದ ಕೆಎಚ್‌ಬಿ ನಿವೇಶನ(KHB site),ಶಿವಮೊಗ್ಗದ ಸರ್ಕಾರಿ ನೌಕರರ ಬಡಾವಣೆಯಲ್ಲಿ ಒಂದು ನಿವೇಶನ, ಆಚಾಪುರದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದ ಕಟ್ಟಡ ಹಾಗೂ ನಿರ್ಮಾಣಗೊಂಡಿರುವ ಮೂರು ಅಂತಸ್ತಿನ ಶಾಲಾ ಕಟ್ಟಡ, ಎರಡು ಕಾರು, ಮೂರು ದ್ವಿಚಕ್ರ ವಾಹನ, ಎಂಟು ಶಾಲಾ ಬಸ್ ಪತ್ತೆಯಾಗಿದೆ. ನಗದು, ಬಂಗಾರ ಕೂಡ ಪತ್ತೆಯಾಗಿದೆ. ಬ್ಯಾಂಕ್ ಲಾಕರ್‌(Bank locker)ಗಳು ಇರುವ ಬಗ್ಗೆಯೂ ವಿಚಾರಣೆ ಮುಂದುವರಿದಿದೆ.
ಜಿಲ್ಲಾ ಅಧಿಕಾರಿ ಶೋಭಾ ಅವರು ತಮ್ಮ ಅಧಿಕಾರ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಅಕ್ರಮ ಸಂಪತ್ತು ಕ್ರೋಢೀಕರಿಸಿದ್ದಾರೆ ಎಂಬ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು. ಈ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಎಸ್ಪಿ ಎಂ.ಎಸ್.ಕೌಲಾಪುರೆ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲೋಕಾಯುಕ್ತ ಪೊಲೀಸರ ಆರು ತಂಡಗಳು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿದರು. ಇದೇ ವೇಳೆ ಕಚೇರಿಯ ಗೆಜೆಟೆಡ್ ಅಧಿಕಾರಿ, ರಾಘವೇಂದ್ರ ಅವರ ಶಿವಮೊಗ್ಗದ ಚಾಲುಕ್ಯನಗರದ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net