ಎಂಡಿಎಫ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಾಗರದ ವೀರಶೈವ ವಸತಿ ನಿಲಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಡಾ. ಎಚ್.ಎಂ.ಶಿವಕುಮಾರ್, ಡಾ. ಜಗದೀಶ್ ಎಂ.ಭಂಡಾರಿ, ನಿಖಿಲ್ ಕುಂಸಿ ಇತರರಿದ್ದರು.
ಸಾಗರ: ಸಾಂಪ್ರದಾಯಿಕ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಬದಲಾಗುವ ಕಾಲ ನಿರ್ಮಾಣವಾಗುತ್ತಿದೆ. ಬೌದ್ಧಿಕ ಸಾಮರ್ಥ್ಯ, ಆತ್ಮವಿಶ್ವಾಸದಿಂದ ಶೈಕ್ಷಣಿಕ ಅರ್ಹತೆ ಪಡೆದು ಸೂಕ್ತ ಉದ್ಯೋಗ ಪಡೆದುಕೊಳ್ಳಬೇಕು ಎಂದು ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ಹೇಳಿದರು.
ಸಾಗರದ ನೆಹರು ಮೈದಾನದಲ್ಲಿರುವ ವೀರಶೈವ ವಸತಿ ನಿಲಯದ ಆವರಣದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಲಿಕೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ತಮ್ಮಲ್ಲಿ ಸಾಮರ್ಥ್ಯ ಗುರುತಿಸಿಕೊಳ್ಳಬೇಕು. ಪದವಿಪೂರ್ವ ಹಂತದ ನಂತರ ಪಡೆದುಕೊಳ್ಳುವ ಶಿಕ್ಷಣ ಭವಿಷ್ಯದ ನಿರ್ಮಾಣಕ್ಕೆ ಪೂರಕ ಆಗಿರಬೇಕು. ಉದ್ಯೋಗ ಮಾರುಕಟ್ಟೆ ವಿಸ್ತಾರ ಆಗುತ್ತಿದ್ದು, ವಿದ್ಯಾರ್ಥಿಗಳು ಅಗತ್ಯ ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಜಗದೀಶ್ ಎಂ.ಭಂಡಾರಿ ಮಾತನಾಡಿ, ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸಲು ಸ್ವೀಕಾರ ಮನೋಭಾವ ಅಗತ್ಯ. ಉನ್ನತ ಶಿಕ್ಷಣ ಪಡೆದುಕೊಳ್ಳುವ ಸಂದರ್ಭದಲ್ಲಿ ಪದವಿಪೂರ್ವ ಹಂತದ ಕಲಿಕೆ ಬುನಾದಿ ಆಗಿದೆ. ನಿಮ್ಮ ಹೊಣೆಗಾರಿಕೆ ಅರ್ಥ ಮಾಡಿಕೊಂಡು ಸಾಧನೆ ಪಥದತ್ತ ಸಾಗಬೇಕು ಎಂದರು.