ಶಿವಮೊಗ್ಗ: ಒಳ ಮೀಸಲಾತಿ (reservation) ಜಾರಿಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಮಾದಾರ ಮಹಾಸಭಾ (mahasabha) ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಪಾಲಿಕೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ(office) ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆಯೇ ತೀರ್ಪು ನೀಡಿದರೂ ಇದುವರೆಗೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೆ 56,342 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಹೈಕೋರ್ಟ್‌ನಲ್ಲಿ ಶೇ.17ರಷ್ಟು ಮೀಸಲಾತಿ ನೀಡುವ ವಿಚಾರ ಬಾಕಿಯಿದ್ದರೂ, ಹಾಲಿ ಇರುವ ಶೇ.15 ರಷ್ಟು ಪರಿಶಿಷ್ಟ ಜಾತಿ ಮೀಸಲಾತಿಯಲ್ಲೇ ಒಳ ಮೀಸಲಾತಿ ಜಾರಿಗೊಳಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂದರು.
ಮಾರ್ಚ್ 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು 56,342 ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.